ನೀರು ಸಂಪರ್ಕ ಕಡಿತ ಎಚ್ಚರಿಕೆ: ಜಲಮಂಡಳಿ ಆದಾಯ ಹೆಚ್ಚಳ | ಬಿಲ್ ಕಟ್ಟದವರ ಸಂಪರ್ಕ ಕಡಿತಗೊಳಿಸಿದ ಜಲಮಂಡಳಿ | ಎಚ್ಚೆತ್ತ ಗ್ರಾಹಕರಿಂದ ನಿಗದಿತವಾಗಿ ನೀರಿನ ಬಿಲ್ ಪಾವತಿ
ಬೆಂಗಳೂರು (ಮಾ. 13): ಗ್ರಾಹಕರು ನೀರಿನ ಶುಲ್ಕ ಬಾಕಿ ಉಳಿಕೊಂಡರೆ ಮುಲಾಜಿಲ್ಲದೆ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಎಚ್ಚರಿಕೆ ನೀಡಿದ ಬೆನ್ನಲ್ಲೇ ಆದಾಯ ಸಂಗ್ರಹ ಹೆಚ್ಚಳವಾಗಿದೆ. ಬಿಲ್ ಜತೆಗೆ ಬಾಕಿ ಮೊತ್ತವನ್ನು ಗ್ರಾಹಕರು ತುಂಬುತ್ತಿದ್ದು, ಕಳೆದ 3 ತಿಂಗಳಿಂದ ಆದಾಯ ಹೆಚ್ಚಿದೆ.
ನಗರದ ಅನೇಕ ಕಡೆ ಗ್ರಾಹಕರು ನೀರಿನ ಶುಲ್ಕ ಪಾವತಿಯನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡದಿರುವುದು ಕಂಡು ಬರುತ್ತಿತ್ತು. ನಿಯಮಿತವಾಗಿ ಶುಲ್ಕ ಪಾವತಿಸುವಂತೆ ಸೂಚಿಸಿದರೂ ಸ್ಪಂದಿಸಿರಲಿಲ್ಲ. ಅಂತಿಮವಾಗಿ ನಿರ್ಲಕ್ಷ್ಯ ತೋರುವ ಗ್ರಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು.
ಬಾಕಿ ಶುಲ್ಕ ಪಾವತಿಸದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಕೆಲ ಕಡೆ ನಿರ್ದಾಕ್ಷಿಣ್ಯವಾಗಿ ನೀರಿನ ಸಂಪರ್ಕ ಕಡಿತಗೊಳಿಸಿದ್ದರಿಂದ, ಎಚ್ಚೆತ್ತಿರುವ ಗ್ರಾಹಕರು ಬಾಕಿ ಶುಲ್ಕ ಪಾವತಿಗೆ ಮುಂದಾಗಿದ್ದಾರೆ. ಹೀಗಾಗಿ ಮೂರು ತಿಂಗಳಿಂದ ಆದಾಯ ಸಂಗ್ರಹದ ಜೊತೆಗೆ ಹಿಂಬಾಕಿ ಮೊತ್ತ ಹೆಚ್ಚಳವಾಗಿದೆ ಎಂದು ಜಲಮಂಡಳಿ ನಿರ್ವಹಣೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಜಲಮಂಡಳಿ ವ್ಯಾಪ್ತಿಯ ಇಂಜಿನಿಯರ್‌ಗಳು, ವಾಟರ್‌ಮ್ಯಾನ್ ಹಾಗೂ ವಾಟರ್ ಇನ್ಸ್‌ಪೆಕ್ಟರ್‌ಗಳಿಗೆ ಕೆಲ ನಿರ್ದೇಶನ ನೀಡಲಾಗಿದೆ. ಹಲವು ತಿಂಗಳಿಂದ ನೀರಿನ ಶುಲ್ಕ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಮೊದಲಿಗೆ ನಿಯಮಿತವಾಗಿ ಶುಲ್ಕ ಪಾವತಿಸುವಂತೆ ತಿಳಿಸಬೇಕು. ಇಲ್ಲವಾದರೆ ನೀರಿನ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಬೇಕು. ಅದಕ್ಕೂ ಸ್ಪಂದಿಸದಿದ್ದರೆ ಮುಲಾಜಿಲ್ಲದೆ ನೀರಿನ ಸಂಪರ್ಕ ಕಡಿತಗೊಳಿಸಿ ಎಂದು ಸೂಚಿಸಲಾಗಿದೆ. ಅದರಂತೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದು ಆದಾಯ ಸಂಗ್ರಹ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಹೇಳಿದರು.
9.69 ಲಕ್ಷ ಸಂಪರ್ಕ:
ಜಲಮಂಡಳಿಯು ನಗರದ 800 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಪ್ರಸ್ತುತ ಗೃಹ ಬಳಕೆ ಹಾಗೂ ವಾಣಿಜ್ಯ ಸೇರಿದಂತೆ ವಿವಿಧ ಬಳಕೆಗೆ 9,69,393 ನೀರಿನ ಸಂಪರ್ಕ ಕಲ್ಪಿಸಿದ್ದು, ಶುಲ್ಕದ ರೂಪದಲ್ಲಿ ಮಾಸಿಕ ಸುಮಾರು 100 ಕೋಟಿ ರು.ಗೂ ಅಧಿಕ ಆದಾಯ ಬರುತ್ತಿದೆ. ಈ ಆದಾಯವೇ ಜಲಮಂಡಳಿಗೆ ಪ್ರಮುಖ ಆರ್ಥಿಕ ಮೂಲವಾಗಿದೆ.
ಮಾಸಿಕ ಆದಾಯದಲ್ಲಿ ಶೇ.50ರಷ್ಟುವಿದ್ಯುತ್ ಶುಲ್ಕಕ್ಕೆ ಪಾವತಿಯಾಗುತ್ತದೆ. ಉಳಿದ ಹಣ ನಿರ್ವಹಣೆ, ನೌಕರರ ವೇತನ ಹಾಗೂ ಇತರೆ ಖರ್ಚುಗಳಿಗೆ ವೆಚ್ಚವಾಗುತ್ತದೆ. ಅಲ್ಲದೆ, ಜಲಮಂಡಳಿಯಿಂದ ಕೆಲ ಯೋಜನೆ ಕೈಗೆತ್ತಿಕೊಂಡಿದ್ದು, ಆರ್ಥಿಕ ಸಂಪನ್ಮೂಲ ಹೊಂದಿಸಬೇಕಿರುವುದರಿಂದ ನೀರಿನ ಶುಲ್ಕ ಸಂಗ್ರಹದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದರು.
ಜಲಮಂಡಳಿ ಪ್ರತಿ ದಿನ ಕಾವೇರಿ ಜಲಾನಯನ ಪ್ರದೇಶದಿಂದ 1400 ದಶ ಲಕ್ಷ ಲೀಟರ್ ನೀರು ಪಂಪಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಪೈಕಿ ನಗರಕ್ಕೆ ನಿತ್ಯ 1350ರಿಂದ 1370 ದಶಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ. ಈ ಪ್ರಕಾರ ಮಾಸಿಕ ಸುಮಾರು 42,200 ದಶ ಲಕ್ಷ ಲೀಟರ್ ಪೂರೈಸಲಾಗುತ್ತಿದೆ.
ಇತ್ತೀಚಿನ ಆದಾಯ ಸಂಗ್ರಹದ ಮಾಹಿತಿ
ತಿಂಗಳು ನೀರಿನ ಶುಲ್ಕ ಸಂಗ್ರಹವಾದ ಮೊತ್ತ (ಕೋಟಿಗಳಲ್ಲಿ)
ಆಗಸ್ಟ್ 106.87 104.22
ಸೆಪ್ಟೆಂಬರ್ 107.67 104.42
ಅಕ್ಟೋಬರ್ 105.52 104.03
ನವೆಂಬರ್ 109.21 110.29
ಡಿಸೆಂಬರ್ 106.96 113.74
ಜನವರಿ 109.49 115.79
