ಗಡಿಯಲ್ಲಿ ಮತ್ತೆ ಪಾಕ್‌ ಶೆಲ್‌ ದಾಳಿ: ಅದೃಷ್ಟವಶಾತ್‌ 400 ಮಂದಿ ಪಾರು| ವಾಣಿಜ್ಯ ಕೇಂದ್ರ ಗುರಿಯಾಗಿಸಿ ಪಾಕಿಸ್ತಾನ ಶೆಲ್‌ ದಾಳಿ| ದಾಳಿ ಹೊರತಾಗಿಯೂ, ಯಾವುದೇ ಪ್ರಾಣ ಹಾನಿ ಇಲ್ಲ

ಜಮ್ಮು[ಮಾ.14]: ಜಮ್ಮು-ಕಾಶ್ಮೀರ ಗಡಿ ರೇಖೆಯ ಬಳಿಯಿರುವ ವಾಣಿಜ್ಯ ಕೇಂದ್ರವನ್ನು ಗುರಿಯಾಗಿಸಿ ಪಾಕಿಸ್ತಾನದ ಭದ್ರತಾ ಪಡೆಗಳು ಬುಧವಾರ ಭಾರೀ ಪ್ರಮಾಣದ ಶೆಲ್‌ ದಾಳಿ ನಡೆಸಿವೆ. ಆದರೆ ಅದೃಷ್ಟವಶಾತ್‌ ಶೆಲ್‌ ದಾಳಿಯಲ್ಲಿ ಸುಮಾರು 400 ಮಂದಿ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಬಚಾವ್‌ ಆಗಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ಚಕ್ಕನ್‌ ದ ಬಾಗ್‌ ಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ವಹಿವಾಟಿಗೆ ಅವಕಾಶ ಕಲ್ಪಿಸುವ ಕೇಂದ್ರವೊಂದಿದೆ. ಬುಧವಾರ ಬೆಳಗ್ಗೆ 10.45ರ ಸುಮಾರಿಗೆ ಪಾಕ್‌ ಪಡೆಗಳು ನಡೆಸಿದ ದಾಳಿ ವೇಳೆ ಒಂದು ಶೆಲ್‌ ವ್ಯಾಪಾರ ಕೇಂದ್ರದ ಹೊರಗಿನ ಸೇತುವೆ ಬಳಿ ಸ್ಫೋಟಗೊಂಡಿದೆ. ಮತ್ತೆರೆಡು ಶೆಲ್‌ಗಳು ವ್ಯಾಪಾರ ಕೇಂದ್ರದ ಆವರಣದೊಳಗೇ ಬಿದ್ದಿದೆ. ಈ ವೇಳೆ ಅಧಿಕಾರಿಗಳು, ಪೊಲೀಸರು, ವಲಸೆ ಅಧಿಕಾರಿಗಳು, ಕೂಲಿ ಕಾರ್ಮಿಕರು, ಗಡಿ ರೇಖೆಯ ವಾಣಿಜ್ಯೋದ್ಯಮಿಗಳು ಸೇರಿದಂತೆ ಇತರರು ಈ ಕೇಂದ್ರದಲ್ಲೇ ಇದ್ದರು. ಅದೃಷ್ಟವಶಾತ್‌ ಜನರು ವ್ಯಾಪಾರ ನಡೆಸುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಶೆಲ್‌ ಬಿದ್ದ ಕಾರಣ, 400 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾಳಿ ವೇಳೆ ಕೇಂದ್ರದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದ ವ್ಯಾಪಾರಿಗಳು ಇದ್ದರು. ಈ ದಾಳಿಗೂ ಮುನ್ನ ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸುಮಾರು 34 ಟ್ರಕ್‌ಗಳಷ್ಟುಸರಕುಗಳನ್ನು ಕಳುಹಿಸಿಕೊಟ್ಟಿದೆ. ಹಾಗೆಯೇ, ಪಿಒಕೆಯಿಂದ ಭಾರತವು 31 ಟ್ರಕ್‌ಗಳ ಸರಕುಗಳನ್ನು ವಿನಿಮಯ ಮಾಡಿಕೊಂಡಿದೆ,’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.