ನವದೆಹಲಿ[ಮಾ.17]: 40 ಸಿಆರ್‌ಪಿಎಫ್‌ ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಯ ಹಿಂದೆ ಪಾಕ್‌ ಉಗ್ರರು ಮತ್ತು ಅದಕ್ಕೆ ಪಾಕಿಸ್ತಾನ ಸರ್ಕಾರದ ನೇರ ಬೆಂಬಲ ಇದೆ ಎನ್ನುವ ವಿಷಯ ಮತ್ತೊಮ್ಮೆ ಸಾಬೀತಾಗಿದೆ. ಪುಲ್ವಾಮಾ ದಾಳಿಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಸಂಸದರೊಬ್ಬರು, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ರನ್ನು ಬಹಿರಂಗವಾಗಿಯೇ ಶ್ಲಾಘಿಸಿದ್ದಾರೆ.

1998ರಲ್ಲಿ ಪರಮಾಣು ಪರೀಕ್ಷೆ ನಡೆಸಿದ 20 ವರ್ಷದ ಬಳಿಕ ಪುಲ್ವಾಮಾ ದಾಳಿಯು ಪಾಕಿಸ್ತಾನದ ಅತ್ಯುತ್ತಮ ನಡೆಯಾಗಿದೆ ಎಂದು ಸಂಸದ ಮುಷಾಹಿದ್‌ ಹುಸೇನ್‌ ಸಯದ್‌ ಹೇಳಿದ್ದಾರೆ.

ಇಸ್ಲಾಮಾಬಾದ್‌ ರಣತಂತ್ರ ಅಧ್ಯಯನ ಸಂಸ್ಥೆ(ಐಎಸ್‌ಎಸ್‌ಐ) ಏರ್ಪಡಿಸಿದ ಪಾಕಿಸ್ತಾನ-ಚೀನಾ ಸಂಸ್ಥೆ ಹಾಗೂ ವಿದೇಶಾಂಗ ವ್ಯವಹಾರಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್‌ ಪಕ್ಷದ ಸದಸ್ಯರಾದ ಹುಸೇನ್‌ ಅವರು, ‘ಪುಲ್ವಾಮಾ ದಾಳಿ ಬಳಿಕ ವಾಯುದಾಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕಚ್ಚಾಟದ ಸಂದರ್ಭದಲ್ಲಿ ಇಡೀ ದೇಶವೇ ಒಂದಾಗಿತ್ತು. ಇದರಿಂದಾಗಿಯೇ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿತು,’ ಎಂದು ಪ್ರತಿಪಾದಿಸಿದರು.

ಮುಂದುವರಿದ ಅವರು, ನಾವು ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಕೈಗೊಂಡೆವು. ಇದರಿಂದಾಗಿಯೇ ಅಂತಾರಾಷ್ಟ್ರೀಯ ಮತ್ತು ದೇಶದ ಜನತೆ ನಮ್ಮ ಪರ ಧ್ವನಿಯೆತ್ತುವಂತಾಯಿತು ಎಂದರು.