ನವದೆಹಲಿ/ಇಸ್ಲಾಮಾಬಾದ್‌(ಸೆ.22): ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಉಗ್ರರಿಂದ ದಾಳಿ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ನೀಡುವ ಸಿಂಧೂ ನದಿ ನೀರಿನ ಪಾಲನ್ನು ಕಡಿತ ಮಾಡುವ ಸಾಧ್ಯತೆ ಇದೆ. ಉಗ್ರರನ್ನು ಮಟ್ಟಹಾಕುವ ಬಗ್ಗೆ ಈ ಹಿಂದಿನ ವಾಗ್ದಾನ ಪೂರೈಸದೇ ಇದ್ದರೆ ಈ ನಿಲುವನ್ನು ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್‌ ಸ್ವರೂಪ್‌ರ ಸುದ್ದಿಗೋಷ್ಠಿಯಲ್ಲಿಯೂ ಪ್ರಸ್ತಾಪ ಮಾಡಿದ್ದಾರೆ. ‘‘ಸಹಕಾರ ಎನ್ನುವುದು ಎರಡೂ ಕಡೆಗಳಿಂದ ನಡೆಯಬೇಕು,’’ಎಂದು ಸ್ವರೂಪ್‌ ಹೇಳಿದಾಗ ಪತ್ರಕರ್ತರು ಯಾವ ರೀತಿಯ ಕ್ರಮ ಎಂದು ವಿಶೇಷವಾಗಿ ಕೇಳಿದಾಗ ‘‘ಸಿಂಧೂ ನದಿ ಒಪ್ಪಂದ ರದ್ದು ಮಾಡುವ ಅಂಶವೂ ಪರಿಶೀಲನೆಯಲ್ಲಿದೆ,’’ಎಂದು ಹೇಳಿದರು.

1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನದಿ ನೀರಿನ ಹಂಚಿಕೆ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರ ಪ್ರಕಾರ ಶೇ.20ರಷ್ಟುನೀರನ್ನು ಮಾತ್ರ ಭಾರತಕ್ಕೆ ಉಪಯೋಗಿಸಲು ಅವಕಾಶ ಉಂಟು. ಒಂದು ವೇಳೆ ನೀರು ಪೂರೈಕೆಯನ್ನು ಭಾರತ ಸರ್ಕಾರ ರದ್ದು ಮಾಡಿದರೆ ಪಾಕಿಸ್ತಾನದಲ್ಲಿ ಭಾರಿ ಹಾಹಾಕಾರ ಉಂಟಾಗಲಿದೆ ಎಂದು ಹೇಳಲಾಗಿದೆ.

ಪಿಎಎಫ್‌ನಿಂದ ಸಮರಾಭ್ಯಾಸ? ಪಿಒಕೆ ಸೇರಿದಂತೆ ಪಾಕ್‌ನ ಉತ್ತರ ಭಾಗದಲ್ಲಿ ವಾಯು ನೆಲೆಗಳ ಮುಚ್ಚುವಿಕೆ ಮತ್ತು ಪಾಕಿಸ್ತಾನ ವಾಯು ಸೇನೆ (ಪಿಎಎಫ್‌)ಯ ಜೆಟ್‌ ವಿಮಾನಗಳ ಅಭ್ಯಾಸ ಕುರಿತು ಅಲ್ಲಿನ ಮಾಧ್ಯಮಗಳಲ್ಲಿ ವರದಿಗಳಾಗಿವೆ. ಪಾಕ್‌ ವಾಯುಸೇನೆಯ ಜೆಟ್‌ ವಿಮಾನಗಳು ಅಲ್ಲಿನ ಹೆದ್ದಾರಿಯೊಂದರಲ್ಲಿ ಭೂಸ್ಪರ್ಷ ಮಾಡಿದ ಹಾಗೂ ಹಾರಾಟ ನಡೆಸಿರುವ ಬಗ್ಗೆ ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಐಎಸ್‌ಐ ನಿರಾಕರಿಸಿದ್ದು, ಅಂಥ ಬೆಳವಣಿಗೆಯೇ ನಡೆದಿಲ್ಲ ಎಂದು ಪ್ರತಿಪಾದಿಸಿದೆ. ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆ ಕರಾಚಿ ಸ್ಟಾಕ್‌ಎಕ್ಸ್‌ಚೇಂಜ್‌ನಲ್ಲಿ ವಹಿವಾಟು ಏರುಪೇರು ಉಂಟಾಯಿತು.

ಬಂಡಿಪೋರದಲ್ಲಿ ಉಗ್ರ ಬಲಿ: ಈ ಮಧ್ಯೆ ಉತ್ತರ ಕಾಶ್ಮೀರದ ಬಂಡಿಪೋರದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಇದರ ಜತೆಗೆ ಮತ್ತೆರಡು ಒಳನುಸುಳುವಿಕೆ ಪ್ರಯತ್ನವನ್ನು ಸೇನಾಪಡೆಗಳು ಹಿಮ್ಮೆಟ್ಟಿಸಿವೆ

ನಿಷೇಧಕ್ಕೆ ನಿರಾಕರಣೆ: ಕಣಿವೆ ರಾಜ್ಯದಲ್ಲಿ ನಡೆಯುವ ಬೀದಿ ಪ್ರತಿಭಟನೆಗಳ ವೇಳೆ ಪೆಲೆಟ್‌ ಗನ್‌ ಬಳಕೆಗೆ ನಿಷೇಧ ಹೇರುವಂತೆ ಕೋರಲಾದ ಅರ್ಜಿಯನ್ನು ಜಮ್ಮು-ಕಾಶ್ಮೀರ ಹೈಕೋರ್ಟ್‌ ತಿರಸ್ಕರಿಸಿದೆ. ನಿಯಂತ್ರಣಕ್ಕೆ ಸಿಗದ ಗುಂಪುಗಳಿಂದ ಕಾಶ್ಮೀರದ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಕೋರ್ಟ್‌ ಈ ನಿರ್ಣಯಕ್ಕೆ ಬಂದಿದೆ. ಪೆಲೆಟ್‌ ಗನ್‌ ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿದ ಅರ್ಜಿಯನ್ನೂ ನ್ಯಾಯಮೂರ್ತಿಗಳಾದ ಎನ್‌ ಪೌಲ್‌ ವಸಂತ ಕುಮಾರ್‌ ಮತ್ತು ಅಲಿ ಮುಹಮ್ಮದ್‌ ಮಾಗ್ರೆ ನ್ಯಾಯಪೀಠ ತಳ್ಳಿಹಾಕಿದೆ.

20 ಭಯೋತ್ಪಾದಕರ ಹತ್ಯೆ?

ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಗಡಿ ರೇಖೆ ದಾಟಿಸಲು ಯತ್ನಿಸಿದ ಸುಮಾರು 20 ಶಂಕಿತ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ‘ದ ಕ್ವಿಂಟ್‌’ ವರದಿ ಮಾಡಿದೆ. ಉರಿ ವಲಯದಲ್ಲಿ ಸೇನೆಯ ಎರಡು ಘಟಕಗಳು ಸೇನಾ ಹೆಲಿಕಾಪ್ಟರ್‌ಗಳ ಮೂಲಕ ಸೆ.20, 21ರಂದು ಈ ಕಾರ್ಯಾಚರಣೆ ನಡೆಸಲಾಗಿದೆ. ಪಿಒಕೆಯ ಮೂರು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಸುಮಾರು 200 ಮಂದಿ ಗಾಯಗೊಂಡಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಅರ್ಜಿ ಪರಿಶೀಲನೆ: ಬಲೂಚಿಸ್ತಾನದ ನಾಯಕ ಬ್ರಹಾಮ್‌ದಾಘ್‌ ಬುಗ್ತಿಯವರ ಭಾರತದಲ್ಲಿನ ರಾಜಕೀಯ ಆಶ್ರಯ ಕುರಿತ ಅರ್ಜಿಯನ್ನು ಗೃಹ ಸಚಿವಾಲಯ ಪರಿಶೀಲಿಸಲಿದೆ. ಬುಗ್ತಿಯವರ ಅರ್ಜಿ ಗುರುವಾರ ಸ್ವೀಕಾರವಾಗಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.