ಉಗ್ರರು ಪುಲ್ವಾಮದಲ್ಲಿ ನಡೆಸಿದ್ದ ಬಾಂಬ್ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದು, ಉಗ್ರರ ಈ ಕೃತ್ಯಕ್ಕೆ ಭಾರೀ ಆಕ್ರೊಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇತ್ತ ಭಾರತ ಉಗ್ರರನ್ನು ಬೆಂಬಲಿಸುತ್ತಿದ್ದ ಪಾಕ್ ನ್ನು ಅತ್ಯಾಪ್ತ ರಾಷ್ಟ್ರ ಪಟ್ಟವನ್ನೂ ಕಸಿದುಕೊಂಡಿತ್ತು. ಅಲ್ಲದೇ ಟೊಮ್ಯಾಟೋ ಸೇರಿದಂತೆ ಇನ್ನಿತರ ತರಕಾರಿಗಳ ರಫ್ತನ್ನೂ ನಿಷೇಧಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ಪತ್ರಕರ್ತನೊಬ್ಬ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಭರಾಟಯಲ್ಲಿ ತಾವೇ ಅಪಹಾಸ್ಯಕ್ಕೀಡಾಗಿದ್ದಾರೆ.
ಕರಾಚಿ[ಫೆ.24]: ಸೋಶಿಯಲ್ ಮಿಡಿಯಾಗಳಲ್ಲಿ ಪಾಕ್ ಪತ್ರಕರ್ತರೊಬ್ಬರ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ದಾಳಿಯ ಬಳಿಕ ಭಾರತ ತೆಗೆದುಕೊಂಡ ಕ್ರಮಗಳಿಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದಾಗಿದೆ. ಭಾರತವು ಪಾಕ್ ಗೆ ರಫ್ತಾಗುತ್ತಿದ್ದ ಟೊಮಾಟೋಗೆ ಕಡಿವಾಣ ಹಾಕಿ ಬಹುದೊಡ್ಡ ತಪ್ಪೆಸಗಿದೆ ಎನ್ನುವ ಪತ್ರಕರ್ತ ತನ್ನೆಲ್ಲಾ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಲ್ಲದೇ ಭಾರತದ ಈ ತಕ್ಕ ಪಾಠ ಕಲಿಸುವುದಾಗಿಯೂ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ಪದೇ ಪದೇ 'ತೌಬಾ ತೌಬಾ' ಎಂದು ಕಿವಿ ಹಿಡಿದುಕೊಂಡು ಭಾರತದ ಕ್ರಮವನ್ನು ಖಂಡಿಸುತ್ತಿರುವ ಈ ಪತ್ರಕರ್ತನ ಈ ವಿಡಿಯೋ ಸದ್ಯ ಟ್ರೋಲಿಗರಿಗೆ ಆಹಾರವಾಗಿದೆ. ಟೊಮಾಟೋ ರಫ್ತಿಗೆ ಕಡಿವಾಣ ಹಾಕಿರುವುದನ್ನು ಖಂಡಿಸುವ ಭರದಲ್ಲಿ 'ಪಾಕಿಸ್ತಾನದ ಬಳಿ ಆಟಂ ಬಾಂಬ್ ಗಳಿವೆ. ಇದನ್ನು ನಾವು ಸಿಂಗಾರ ಮಾಡಲು ಇಟ್ಟುಕೊಂಡಿಲ್ಲ. ಇದನ್ನು ನಾವು ಕೇವಲ ಭಾರತದ ವಿರುದ್ಧ ಬಳಸಲು ಇಟ್ಟುಕೊಂಡಿದ್ದೇವೆ' ಎನ್ನುವ ವಿವಾದತ್ಮಕ ಹೆಳಿಕೆ ನೀಡಿದ್ದಾರೆ.
ಇಷ್ಟೇ ಅಲ್ಲದೇ 'ಪಾಕಿಸ್ತಾನ ಟೊಮಾಟೋ ಇಲ್ಲದೆ ಬದುಕುವುದಿಲ್ಲ ಎಂದು ಭಾರತಕ್ಕೆ ಅನಿಸುತ್ತದೆ. ಆದರೆ ಮುಂದಿನ ದಿನಗಳಲ್ಲಿ ನಾವು ಖುದ್ದು ಟೊಮಾಟೋ ಹನ್ಣುಗಳನ್ನು ಬೆಳೆಯುತ್ತೇವೆ' ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಈ ಪತ್ರಕರ್ತ 'ಯಾವ ರೀತಿ ಇಂದು ಭಾರತೀಯರು ನರಳುತ್ತಿದ್ದಾರೋ ನಾಳೆ ಅದೇ ರೀತಿ ಅವರು ಬೆಳೆಯುವ ಟೊಮಾಟೋ ಹಣ್ಣುಗಳು ಕೊಳೆಯಲಿವೆ. ಭಾರತ ಟೊಮಾಟೋ ವಿಚಾರವಾಗಿ ತೆಗೆದುಕೊಂಡ ಕ್ರಮಕ್ಕೆ ಆಟಂ ಬಾಂಬ್ ಗಳ ಮೂಲಕ ಉತ್ತರ ಕೊಡುವ ಸಮಯವೀಗ ಬಂದಿದೆ' ಎಂದಿದ್ದಾರೆ.
'ಟೊಮಾಟೋ ಬದಲಾಗಿ ನಾವು ಮೊಸರಿನ ಬಳಕೆ ಮಾಡುತ್ತೇವೆ. ಮುಂದಿನ ವರ್ಷ ನಾವೆಷ್ಟು ಟೊಮಾಟೋ ಬೆಳೆಯುತ್ತೇವೆ ಎಂದರೆ ಪಾಕಿಸ್ತಾನದಿಂದಲೇ ಭಾರತಕ್ಕೆ ರಫ್ತು ಮಾಡುತ್ತೇವೆ' ಎಂದೂ ಈ ಪತ್ರಕರ್ತ ವಿಡಿಯೋದಲ್ಲಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸದ್ಯ ಟ್ರೋಲ್ ಆಗುತ್ತಿದ್ದು, ಪತ್ರಕರ್ತನ ಮಾತುಗಳು ಹಾಸ್ಯಕ್ಕೀಡಾಗಿವೆ. ಇಷ್ಟೇ ಅಲ್ಲದೇ ಈ ಪತ್ರಕರ್ತ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವೇಳೆ ಹಿಂದೆ ಕುಳಿತಿದ್ದ ಸಿಬ್ಬಂದಿಗಳು ಕೂಡಾ ಅವರನ್ನು ಲೇವಡಿ ಮಾಡುತ್ತಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
