ಇಸ್ಲಾಮಾಬಾದ್(ಜು.31): ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ವ್ಯವಸ್ಥೆಯ ಕಾವಲುನಾಯಿಯಾಗಿ ಪತ್ರಿಕಾರಂಗ ಸಮಾಜದ ಆಗುಹೋಗುಗಳನ್ನು ನಿಯಮಿತವಾಗಿ ಜನರಿಗೆ ತಲುಪಿಸುತ್ತದೆ. ಸರ್ಕಾರ, ಸಮಾಜದ ನಡುವಿನ ಕೊಂಡಿಯಾಗಿ ಪತ್ರಿಕೋದ್ಯಮಿ ಕೆಲಸ ಮಾಡುತ್ತಾನೆ.

ಆಡು ಮುಟ್ಟದ ಗಿಡವಿಲ್ಲ ಎಂಬ ನಾಣ್ಣುಡಿಯಂತೆ ಪತ್ರಕರ್ತ ಮಾಡದ ಸುದ್ದಿಯಿಲ್ಲ, ತಲುಪದ ಸ್ಥಳವಿಲ್ಲ. ಅದು ಪ್ರಕೃತಿ ವಿಕೋಪವಿರಲಿ, ಯುದ್ಧವಿರಲಿ, ಚುನಾವಣೆ ಇರಲಿ, ಹಬ್ಬವಿರಲಿ ಪತ್ರಕರ್ತ ಎಲ್ಲ ಸ್ಥಳಗಳಿಗೂ ಹೋಗುತ್ತಾನೆ. ಜೀವ ಪಣಕ್ಕಿಟ್ಟು ಜನರಿಗೆ ಸುದ್ದಿ ತಲುಪಿಸುವ ಕೆಲಸ ಮಾಡುತ್ತಾನೆ. ಈ ಕರ್ತವ್ಯ ನಿರ್ವಹಣೆಯಲ್ಲಿ ಆತ ಕೆಲವೊಮ್ಮೆ ಜೀವ ಕಳೆದುಕೊಂಡ ಉದಾಹರಣೆಯೂ ಇದೆ.

ಅದರಂತೆ ಪಾಕಿಸ್ತಾನದ ಸುದ್ದಿ ಮಾಧ್ಯಮವೊಂದರ ಪತ್ರಕರ್ತ, ಪ್ರವಾಹದ ನೀರಲ್ಲಿ ಕುತ್ತಿಗೆವರೆಗೂ ಮುಳುಗಿ ರಿಪೋರ್ಟಿಂಗ್ ಮಾಡಿದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಹೌದು, ಪಾಕಿಸ್ತಾನದ ಸುದ್ದಿ ಮಾಧ್ಯಮದ ವರದಿಗಾರ ಅಜ್ದರ್ ಹುಸೇನ್ ಕೋಟ್ ಚಟ್ಟಾ ಪ್ರಾಂತ್ಯದಲ್ಲಿ ಉದ್ಭವಿಸಿರುವ ಪ್ರವಾಹ ಪರಿಸ್ಥಿತಿಯನ್ನು ವರದಿ ಮಾಡಲು ತೆರಳಿದ್ದ. ಈ ವೇಳೆ ಕುತ್ತಿಗೆ ಮಟ್ಟದ ನೀರಲ್ಲೇ ರಿಪೋರ್ಟಿಂಗ್ ಮಾಡಿ ವಸ್ತುಸ್ಥಿತಿಯನ್ನು ತಲುಪಿಸುವ ಪ್ರಯತ್ನ ಮಾಡಿದ್ದಾನೆ.

ಇನ್ನು ಅಜ್ದರ್ ಹುಸೇನ್ ರಿಪೋರ್ಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟಿಜನ್’ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲೆವರು ಅಜ್ದರ್ ಕರ್ತವ್ಯಪ್ರಜ್ಞೆಯನ್ನು ಕೊಂಡಾಡಿದರೆ, ಇನ್ನೂ ಕೆಲವರು ಜೀವವನ್ನು ಪಣಕ್ಕಿಟ್ಟ ಅಜ್ದರ್ ಹುಂಬು ಧೈರ್ಯವನ್ನು ಪ್ರಶ್ನಿಸಿದ್ದಾರೆ.