ಇಸ್ಲಮಾಬಾದ್[ಡಿ.20]: ಪಾಕಿಸ್ತಾನದಲ್ಲಿ ನಡೆಯುವ ಕೆಲ ಘಟನೆಗಳು ಭಾರತದಲ್ಲಿ ವೈರಲ್ ಆಗುವುದು ಸಾಮಾನ್ಯ. ಕೆಲವೊಮ್ಮೆ ಈ ಸುದ್ದಿಗಳು ನಮ್ಮನ್ನು ಅಚ್ಚರಿಗೊಳಿಸಿದರೆ ಮತ್ತೆ ಕೆಲವೊಮ್ಮೆ ಬೆಚ್ಚಿ ಬೀಳಿಸುತ್ತವೆ. ಕೆಲ ವರ್ಷಗಳ ಹಿಂದೆ ಪಾಕ್ ಪತ್ರಕರ್ತ ಚಾಂದ್ ನವಾಬ್ ತನ್ನ ವರದಿಯಿಂದಾಗಿ ಸಾಮಾಜಿಕ ತಾಣಗಳಲ್ಲಿ ನಗೆಪಾಟಲಿಗೀಡಾಗಿದ್ದರು. ಇದನ್ನು ಬಾಲಿವುಡ್ನ ಹಿಟ್ ಸಿನಿಮಾ ಭಜರಂಗಿ ಭಾಯಿಜಾನ್ ನಲ್ಲಿ ಅನುಕರಿಸಲಾಗಿತ್ತು. ಇದೀಗ ಇಂತಹುದೇ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ಪಾಕ್ ನಲ್ಲಿ ಲೈವ್ ವರದಿ ಮಾಡುತ್ತಿದ್ದ ಮತ್ತೊಬನ್ಬ ಪತ್ರಕರ್ತ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.

ಪಾಕ್ ನ ಜಿಯೋ ಸುದ್ದಿ ವಾಹಿನಿಯ ಪತ್ರಕರ್ತ ಅಮೀನ್ ಹಫೀಜ್ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಪಾಕ್ ನಲ್ಲಿ ಕತ್ತೆಗಳ ಕತ್ತೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಸದ್ಯ ಇದು ಕತ್ತೆಗಳನ್ನು ಹೊಂದಿರುವ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರ ಎನ್ನಲಾಗುತ್ತಿದೆ. ಲಾಹೋರ್ ನಲ್ಲಿ ಕತ್ತೆಗಳ ಸಂಖ್ಯೆ 41 ಸಾವಿರ ದಾಟಿದ್ದು, ಇಲ್ಲಿನ ಸರ್ಕಾರ ಕತ್ತೆಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಸ್ಪತ್ರೆಯನ್ನೂ ಆರಂಭಿಸಿದೆ. ಕತ್ತೆಗಳಿಗಿಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲಾ ಅಗತ್ಯತೆಗಳನ್ನು ಪೂರೈಸಲಾಗುತ್ತಿದೆ. ಮತ್ತೊಂದೆಡೆ ಕತ್ತೆಗಳ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ. ಹೀಗಿರುವಾಗ ಪಾಕ್ ಪತ್ರಕರ್ತ ಅಮೀನ್ ಇದರ ವರದಿ ಮಾಡಲು ತೆರಳಿದ್ದಾರೆ.

 ಕರಾಚಿಯಿಂದ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ಅಮೀನ್, ವರದಿ ಇನ್ನೂ ಚೆನ್ನಾಗಿ ಮೂಡಿ ಬರಬೇಕೆಂಬ ಹುಮ್ಮಸ್ಸಿನಲ್ಲಿ ಕತ್ತೆ ಮೇಲೇರಿ ಕುಳಿತಿದ್ದಾನೆ. ಬಹುಶಃ ಇಷ್ಟು ಪ್ರಬುದ್ಧ ವ್ಯಕ್ತಿ ತನ್ನ ಬೆನ್ನ ಮೇಲೆ ಕುಳಿತುಕೊಳ್ಳುವುದು ಆ ಕತ್ತೆಗೆ ಇಷ್ಟವಾಗಿಲ್ಲವೇನೋ, ಹೀಗಾಗಿ ಒಂದೇ ಸಮನೆ ಕುಣಿಯಲಾರಂಭಿಸಿದೆ. ಇದ್ದಕ್ಕಿದ್ದಂತೆ ಕುಣಿಯಲಾರಂಭಿಸಿದ ಕತ್ತೆಯಿಂದಾಗಿ ಲೈವ್ ರಿಪೋರ್ಟಿಂಗ್ ಗೆ ಅಡಚಣೆಯಾಗದಿರಲೆಂದು ಅಮೀನ್ ಆ ಕೂಡಲೇ ಇಳಿಯಲು ಯತ್ನಿಸಿದ್ದಾನೆ. ಆದರೆ ಇಳಿಯುವ ಭರಾಟೆಯಲ್ಲಿ ಕೆಳಗೆ ಬಿದ್ದು ನಗೆಪಾಟಲಿಗೀಡಾಗಿದ್ದಾರೆ.

ತಮ್ಮ ವಿನೂತನ ರಿಪೋರ್ಟಿಂಗ್ ಶೈಲಿಯಿಂದಲೇ ಈ ಪತ್ರಕರ್ತ ಬಹಳಷ್ಟು ಫೇಮಸ್ ಆಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕ್ರಿಕೆಟ್ ನ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ಅಮೀನ್, ಸಂಭ್ರಮದಿಂದ ಕುಣಿಯುತ್ತಿದ್ದ ಅಭಿಮಾನಿಗಳೊಂದಿಗೆ ಕುಣಿದುಕೊಂಡೇ ವರದಿ ಮಾಡಿದ್ದರು. ಈ ವಿಡಿಯೋ ತುಣುಕು ಕೂಡಾ ವೈರಲ್ ಆಗಿತ್ತು.