ಇಸ್ಲಾಮಾಬಾದ್(ಫೆ.28): ಭಾರತ-ಪಾಕ್ ನಡುವಿನ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ, ಸಮ್ಜೋತಾ ಎಕ್ಸಪ್ರೆಸ್ ರೈಲನ್ನು ಪಾಕಿಸ್ತಾನ ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ, ಭಾರತಕ್ಕೆ ಸದ್ಯ ರೈಲು ಸಂಚಾರ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಪಾಕಿಸ್ತಾನ ಈ ಕುರಿತು ಭಾರತಕ್ಕೆ ಯಾವುದೇ ಅಧಿಕೃತ ಮಾಹಿತಿ ನೀಡದಿರುವುದು ಆಶ್ವರ್ಯವನ್ನುಂಟು ಮಾಡಿದೆ.

ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಪ್ರಮುಖವಾಗಿ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿತ್ತು.

ಅಲ್ಲದೇ ಪಾಕಿಸ್ತಾನದಿಂದ ಆಮದಾಗುವ ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸುವ ಮೂಲಕ ಪಾಕಿಸ್ತಾನಕ್ಕೆ ಪೆಟ್ಟು ನೀಡಲಾಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಇದೀಗ ಸಮ್ಜೋತಾ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಇನ್ನು ಪಾಕಿಸ್ತಾನ ಏಕಾಏಕಿ ಸಮ್ಜೋತಾ ರೈಲು ಸಂಚಾರ ರದ್ದುಗೊಳಿಸಿರುವ ಪರಿಣಾಮ, 27 ಯಾತ್ರಿಕರು ಗಡಿಯಲ್ಲೇ ಕಾಯುವಂತಾಗಿದೆ ಎಂದು ಮೂಲಗಳು ತಿಳಿಸಿವೆ. ಇವರಲ್ಲಿ ಮೂವರು ಪಾಕಿಸ್ತಾನಿ ಮತ್ತು 24 ಭಾರತೀಯ ಯಾತ್ರಿಕರು ಇದ್ದಾರೆ ಎನ್ನಲಾಗಿದೆ.