Asianet Suvarna News Asianet Suvarna News

ನಾವು ದಾಳಿ ನಡೆಸಿ ಸುಮ್ಮನೆ ಕುಳಿತಿದ್ದೆವು : ಪಾಕ್‌ ಬೆಳಗ್ಗೆ 5ಕ್ಕೇ ಅಳುತ್ತಿತ್ತು

ಪುಲ್ವಾಮ ದಾಳಿ ಬಳಿ ಭಾರತ ಸರ್ಜಿಕಲ್ ದಾಳಿ ನಡೆಸಿ ನಿಶ್ಶಬ್ದವಾಗಿ ಕುಳಿತಿತ್ತು. ಆದರೆ ಪಾಕಿಸ್ತಾನ ಬೆಳಗ್ಗೆ 5ಕ್ಕೆ ಎದ್ದು ಅಳುತಿತ್ತು. ಇದೇ ಸರ್ಜಿಕಲ್ ದಾಲಿ ನಡೆಸಿದ್ದಕ್ಕೆ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Pakistan started crying at 5am after Balakot strikes Says PM Modi
Author
Bengaluru, First Published Mar 10, 2019, 8:10 AM IST

ನೋಯ್ಡಾ :   ಭಯೋತ್ಪಾದನೆಯ ವಿರುದ್ಧ ತೊಡೆತಟ್ಟಿ ಹೋರಾಟಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ‘2016ರಲ್ಲಿ ನಡೆದ ಉರಿ ದಾಳಿಯ ಬಳಿಕ ಭಾರತ ‘ಹೊಸ ರೀತಿ, ಹೊಸ ನೀತಿ’ ಘೋಷಣೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ.

ಇದೇ ವೇಳೆ, ಬಾಲಾಕೋಟ್‌ ದಾಳಿಗೆ ಪಾಕಿಸ್ತಾನವೇ ಸಾಕ್ಷಿ. ನಾವು ವಾಯುದಾಳಿ ನಡೆಸಿ ನಿಶ್ಶಬ್ದವಾಗಿ ಕುಳಿತಿದ್ದೆವು. ಆದರೆ, ಪಾಕಿಸ್ತಾನ ಬೆಳಗ್ಗೆ 5 ಗಂಟೆಯಿಂದಲೇ ದಾಳಿ ಬಗ್ಗೆ ‘ಅಳಲು’ ಆರಂಭಿಸಿತು ಎಂದು ವಿಶ್ಲೇಷಿಸಿದ್ದಾರೆ.

ಯುಪಿಎ ಬಗ್ಗೆ ಟೀಕೆ: ಗ್ರೇಟರ್‌ ನೋಯ್ಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶನಿವಾರ ಮಾತನಾಡಿದ ಪ್ರಧಾನಿ ಮೋದಿ, ‘2008ರ ನ.26ರ ಮುಂಬೈ ದಾಳಿ ಬಳಿಕ ಅಂದಿನ ಯುಪಿಎ ಸರ್ಕಾರ ಸುಮ್ಮನೇ ಕುಳಿತಿತು. ಪಾಕಿಸ್ತಾನದ ಮೇಲೆ ಕ್ರಮ ಜರುಗಿಸಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. 2016ರಂದು ನಡೆದ ಉರಿ ದಾಳಿಯ ಬಳಿಕ ಭಾರತ ‘ಹೊಸ ರೀತಿ, ಹೊಸ ನೀತಿ’ ಘೋಷಣೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದೇ ಮೊದಲ ಬಾರಿಗೆ ಭಾರತ ಸರ್ಜಿಕಲ್‌ ದಾಳಿಯೊಂದಿಗೆ ಉಗ್ರರಿಗೆ ಯಾವ ಭಾಷೆಯಲ್ಲಿ ಪಾಠ ಕಲಿಸಬೇಕೋ ಅದೇ ಭಾಷೆಯಲ್ಲೇ ತಕ್ಕ ಉತ್ತರ ನೀಡುತ್ತಿದೆ’ ಎಂದರು.

‘ಈಗ ಹೇಳಿ, ದೇಶದ ಮೇಲೆ ದಾಳಿ ಮಾಡಿದ ಉಗ್ರರ ವಿರುದ್ಧ ಏನೂ ಮಾಡದ ಸರ್ಕಾರ ನಿಮಗೆ ಬೇಕಾ? ನಿದ್ದೆ ಮಾಡುತ್ತಿರುವ ಪ್ರಧಾನಿ ನಿಮಗೆ ಬೇಕಾ’ ಎಂದು ಜನರತ್ತ ಕೈ ತೋರಿಸಿ ಮೋದಿ ಪ್ರಶ್ನಿಸಿದರು.

5 ಗಂಟೆಗೇ ಪಾಕ್‌ ಅಳುತ್ತಿತ್ತು!:

ಇನ್ನು ಫೆಬ್ರವರಿ 26ರಂದು ಪಾಕ್‌ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನ ಜೈಷ್‌ ಎ ಮೊಹಮ್ಮದ್‌ ಉಗ್ರರ ಶಿಬಿರದ ಮೇಲೆ ನಡೆದ ವಾಯುದಾಳಿಗೆ ಸಾಕ್ಷ್ಯ ಕೇಳುವವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ‘ಅಂದು ನಸುಕಿನಲ್ಲಿ ಭಾರತವು ವಾಯುದಾಳಿ ಮುಗಿಸಿ ನಿಶ್ಶಬ್ದದಿಂದ ಕುಳಿತು ಪರಿಸ್ಥಿತಿಯನ್ನು ಗಮನಿಸುತ್ತಿತ್ತು. ಆದರೆ ಬೆಳಗ್ಗೆ 5 ಗಂಟೆಗೇ ಪಾಕಿಸ್ತಾನವು ‘ಮೋದೀ ನೇ ಮಾರಾ.. ಮೋದೀನೇ ಮಾರಾ..’ (ಮೋದಿ ದಾಳಿ ಮಾಡಿದರು) ಎಂದು ಟ್ವೀಟರ್‌ ಮೂಲಕ ಅಳಲು ಆರಂಭಿಸಿತು. ಇದಕ್ಕಿಂತ ಸಾಕ್ಷಿ ಬೇಕಾ?’ ಎಂದು ಪ್ರಶ್ನಿಸಿದರು.

‘ನಮ್ಮ ಯೋಧರು ಯಾವೊಬ್ಬ ಉಗ್ರನನ್ನೂ ದೇಶದೊಳಗೆ ನುಗ್ಗಿಬರಲು ಬಿಡುವುದಿಲ್ಲ. ಆ ಸಾಮರ್ಥ್ಯ ನಮ್ಮ ಯೋಧರಲ್ಲಿದೆ. ಉಗ್ರರ ವಿರುದ್ಧ ಸೂಕ್ತ ರೀತಿಯಲ್ಲಿ ಹೋರಾಟ ನಡೆಸುತ್ತಾರೆ. ಅನಿವಾರ್ಯವಾದರೆ ಇನ್ನೊಂದು ಸರ್ಜಿಕಲ್‌ ಸ್ಟೆ್ರೖಕ್‌ ನಡೆಸಲಿಕ್ಕೂ ಹಿಂಜರಿಯುವುದಿಲ್ಲ’ ಎಂದು ಗುಡುಗಿದರು.

‘ಇಂದು ಕೆಲ ರಾಜಕಾರಣಿಗಳು ಪಾಕಿಸ್ತಾನದ ವಿಚಾರದಲ್ಲಿ ದೇಶದ ನಡೆಯನ್ನೇ ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಜನರು ಅಂಥವರನ್ನು ಗುರುತಿಸಿ ಅವರ ಮೇಲೆ ವಿಶ್ವಾಸ ಇಡಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುತ್ತಾರೆ. ದೇಶದಲ್ಲಿ ಈಗ ಪ್ರತಿಯೊಬ್ಬ ಭ್ರಷ್ಟಾಚಾರಿ ಮೋದಿ ಜತೆ ಮುನಿಸಿಕೊಂಡಿದ್ದಾನೆ. ಅವರಿಗೆ ಮೋದಿ ಕಂಡರೆ ಆಗುತ್ತಿಲ್ಲ. ಅವರೆಲ್ಲ ಪ್ರಧಾನಿಯನ್ನು ಟೀಕಿಸುವುದರಲ್ಲೇ ಸ್ಪರ್ಧೆಗೆ ಇಳಿದಿದ್ದಾರೆ. ಅವರೆಷ್ಟುಬಾರಿ ನನ್ನನ್ನು ಟೀಕಿಸುತ್ತಾರೋ ಅಷ್ಟುಮತಗಳು ನನಗೆ ಸಿಗಲಿದೆ’ ಎಂದು ಹೇಳುವ ಮೂಲಕ ತಮ್ಮನ್ನೂ ಟೀಕಿಸುವವರನ್ನು ಲೇವಡಿ ಮಾಡಿದರು.

Follow Us:
Download App:
  • android
  • ios