ಇಸ್ಲಾಮಾಬಾದ್‌(ಜು.06): ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ಗೆ 10 ವರ್ಷ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಷರೀಪ್‌ ಪುತ್ರಿ ಮರಿಯಮ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 

ಷರೀಫ್ ಪಾಕ್  ಪ್ರಧಾನಿ ಆಗಿದ್ದ ಸಮಯದಲ್ಲಿ ಹಾಗೂ ನಂತರದಲ್ಲಿ ನಡೆಸಿರುವ ಭ್ರಷ್ಟಾಚಾರಗಳಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ಶಿಕ್ಷೆ ನೀಡಲಾಗಿದೆ. ಷರೀಫ್‌ಗೆ 10 ವರ್ಷ ಜೈಲು ಹಾಗೂ 8 ಮಿಲಿಯನ್‌ ಪೌಂಡ್‌ ದಂಡ ಕೂಡ ವಿಧಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪನಾಮಾ ಪೇಪರ್ ಹಗರಣದಲ್ಲಿ ಷರೀಫ್‌ ಹೆಸರು ಬಹಿರಂಗಗೊಂಡಿತ್ತು. 

ಲಂಡನ್‌ನಲ್ಲಿರುವ ಐಷಾರಾಮಿ ಬಂಗಲೆಯ ಮಾಲೀಕತ್ವದ ವಿಚಾರವಾಗಿ ಹಲವು ಬಾರಿ ವಿಚಾರಣೆ ನಡೆದಿದ್ದು ಕೋರ್ಟ್‌ ನಾಲ್ಕು ಬಾರಿ ಶಿಕ್ಷೆ ಪ್ರಮಾಣ ಪ್ರಕಟಿಸುವುದನ್ನು ಮುಂದೂಡಿತ್ತು. ತಮ್ಮ ಪತ್ನಿ ತೀವ್ರ ಅನಾರೋಗ್ಯಗೊಂಡಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ತೀರ್ಪು ಪ್ರಕಟಿಸುವುದನ್ನು ಮುಂದೂಡಬೇಕೆಂದು ಷರೀಫ್‌ ಮನವಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್  ತೀರ್ಪು ಪ್ರಕಟಿಸಿತು. ಷರೀಫ್‌ ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವುದು ಸಾಬೀತಾಗಿದೆ.