ಇಸ್ಲಾಮಾಬಾದ್‌ [ಆ.18]:   ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ ಬಳಿಕ ಆಕ್ರೋಶದ ಮಾತುಗಳನ್ನು ಆಡುತ್ತಿದ್ದ ಪಾಕಿಸ್ತಾನ ಈಗ ಯುದ್ಧ ಭೀತಿಗೆ ಒಳಗಾಗಿರುವಂತಿದೆ. ಅಣ್ವಸ್ತ್ರವನ್ನು ಮೊದಲು ಬಳಸುವುದಿಲ್ಲ ಎಂಬ ನೀತಿಗೆ ಈಗಂತೂ ಬದ್ಧರಿದ್ದೇವೆ. ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿಕೆ ಬೆನ್ನಲ್ಲೇ, ಭಾರತ ತನ್ನ ಮೇಲೆ ಯುದ್ಧ ಸಾರಬಹುದು ಎಂದು ಹಲುಬುತ್ತಿದೆ.

ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದಲ್ಲಿ ಶನಿವಾರ ನಡೆದ ಅತ್ಯುನ್ನತ ಸಭೆಯ ಬಳಿಕ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಜತೆಗೂಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನಾ ವಕ್ತಾರ ಮೇಜರ್‌ ಜನರಲ್‌ ಆಸಿಫ್‌ ಗಫäರ್‌, ಕಾಶ್ಮೀರ ವಿಚಾರದಿಂದ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಪಾಕ್‌ ಮೇಲೆ ಭಾರತ ಯುದ್ಧ ಮಾಡುವ ಸಂಭವವಿದೆ. ಯಾವುದೇ ಉದ್ದೇಶವಿಲ್ಲದ ಸಮರ ನಡೆಯುವ ಸಾಧ್ಯತೆಯಂತೂ ಇದೆ. ಕಾಶ್ಮೀರ ವಿಷಯ ಅಣ್ವಸ್ತ್ರ ಬಳಕೆಗೂ ಕಾರಣವಾಗಬಹುದು. ಆದಾಗ್ಯೂ ಅಂತಹ ಯಾವುದೇ ರೀತಿಯ ದುಸ್ಸಾಹಸ ಎದುರಿಸಲು ಸಂಪೂರ್ಣ ಸಜ್ಜಾಗಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಖುರೇಷಿ, ಅಣ್ವಸ್ತ್ರ ಕುರಿತ ರಾಜನಾಥ ಸಿಂಗ್‌ ಹೇಳಿಕೆ ಬೇಜವಾಬ್ದಾರಿತನದ್ದು ಹಾಗೂ ದುರದೃಷ್ಟಕರವಾದುದು ಎಂದು ಟೀಕಿಸಿದರು. ಇದೇ ವೇಳೆ, ವಿದೇಶಾಂಗ ಸಚಿವಾಲಯದಲ್ಲಿ ವಿಶೇಷ ಕಾಶ್ಮೀರ ಘಟಕ ತೆರೆಯಲಾಗುವುದು. ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಗಳನ್ನು ಎಲ್ಲ ರಾಯಭಾರ ಕಚೇರಿಗಳಲ್ಲೂ ನೇಮಕ ಮಾಡಿ, ಜಾಗತಿಕ ಮಟ್ಟದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದರು.