ಇಸ್ಲಾಮಾಬಾದ್(ಫೆ.19): ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವ ಕುರಿತು ಸಾಕ್ಷ್ಯ ನೀಡಿ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಸಂದೇಶ ಕಳುಹಿಸಿದ್ದಾರೆ.

ಪುಲ್ವಾಮಾ ಉಗ್ರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ರೇಡಿಯೋದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಭಾರತ ಸರ್ಕಾರ ವಿನಾಕಾರಣ ಪಾಕಿಸ್ತಾನವನ್ನು ದೂಷಣೆ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಪುಲ್ವಾಮಾ ಉಗ್ರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿರುವ ಇಮ್ರಾನ್, ಸಾಕ್ಷ್ಯಾಧಾರಗಳಿಲ್ಲದೇ ಪಾಕಿಸ್ತಾನದ ಮೇಲೆ ಗೂಬೆ ಕೂರಿಸುವುದು ಭಾರತ ಸರ್ಕಾರಕ್ಕೆ ಸಮಾನ್ಯವಾಗಿ ಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಪುಲ್ವಾಮಾ ದಾಳಿಯನ್ನೇ ನೆಪ ಮಾಡಿ ಭಾರತವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ನಾವೂ ಕೂಡ ಪ್ರತ್ಯುತ್ತರ ನೀಡಲು ಸಿದ್ಧ ಎಂದು ಇಮ್ರಾನ್ ಖಾನ್ ಎಚ್ಚರಿಸಿದ್ದಾರೆ.

ನಮ್ಮ ಭದ್ರತೆಗೆ ಧಕ್ಕೆಯಾದರೆ ಅಥವಾ ಭಾರತ ನಮ್ಮ ಮೇಲೆ ದಾಳಿ ಮಾಡಿದರೆ, ಆತ್ಮರಕ್ಷಣೆಗಾಗಿ ನಾವೂ ಕೂಡ ಪ್ರತಿದಾಳಿ ಮಾಡುತ್ತೇವೆ ಎಂಬುದನ್ನು ಭಾರತ ಸರ್ಕಾರ ಮರೆಯಬಾರದು. ಯುದ್ಧ ಆರಂಭ ಮಾತ್ರ ನಮ್ಮ ಕೈಯಲ್ಲಿರುತ್ತದೆಯೇ ಹೊರತು ಮುಕ್ತಾಯವಲ್ಲ ಎಂದು ಇಮ್ರಾನ್ ಮಾರ್ಮಿಕವಾಗಿ ನುಡಿದಿದ್ದಾರೆ.