ನವದೆಹಲಿ(ಆ.22): ಭಾರತ-ಪಾಕಿಸ್ತಾನ ನಡುವೆ ಸಂಬಂಧ ತೀರ ಹಳಸಿದ್ದು, ಶಾಂತಿ ಮಾತುಕತೆ ನಡೆಸಿ ಪ್ರಯೋಜನವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ದಿ ನ್ಯೂಯಾರ್ಕ್ ಟೈಮ್ಸ್’ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶೇಷ ಸಂದರ್ಶನ ನೀಡಿದ್ದು, ಮಾತನಾಡಲು ಭಾರತ-ಪಾಕಿಸ್ತಾನ ಬಳಿ ಯಾವುದೇ ಮಾತಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

ಭಯೋತ್ಪಾದನೆ ಮತ್ತು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗಳನ್ನು ಒಟ್ಟಾಗಿಸಲು ಸಾಧ್ಯವಿಲ್ಲ ಎಂಬ ಭಾರತದ ನಿಲುವಿಗೆ ಪ್ರತಿಯಾಗಿ ಇಮ್ರಾನ್ ಈ ಹತಾಶೆಯ ಹೇಳಿಕೆ ನೀಡಿದ್ದಾರೆ. 

ಭಾರತದೊಂದಿಗಿನ ಭವಿಷ್ಯದ ಮಾತುಕತೆ ಸಾಧ್ಯತೆಗಳನ್ನು ತಳ್ಳಿಹಾಕಿರುವ ಇಮ್ರಾನ್, ಭಾರತದೊಂದಿಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. 

 ಶಾಂತಿ ಮತ್ತು ಮಾತುಕತೆಗಾಗಿ ನಾವು ಮಾಡುತ್ತಿರುವ ಎಲ್ಲ ಪ್ರಾಮಾಣಿಕ  ಪ್ರಯತ್ನಗಳನ್ನು ಭಾರತವನ್ನು ಸಮಾಧಾನಪಡಿಸುವುದಕ್ಕಾಗಿ ಮಾಡಿದ್ದಾಗಿ ಇಮ್ರಾನ್ ಹೇಳಿರುವುದು ಅಚ್ಚರಿ ಮೂಡಿಸಿದೆ.

 ಇನ್ನು ಇಮ್ರಾನ್ ಹೇಳಿಕೆಗೆ ಅಮೆರಿಕದ ಭಾರತದ ರಾಯಭಾರಿ ಹರ್ಷ್ ವರ್ಧನ್ ಶ್ರೀಂಗ್ಲಾ ಪ್ರತಿಕ್ರಿಯೆ ನೀಡಿದ್ದು, ನಾವು ಮಾತುಕತೆಗೆ ಮುಂದಾದಾಗ ಪ್ರತಿ ಬಾರಿಯೂ ಪಾಕಿಸ್ತಾನ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಹರಿಹಾಯ್ದಿದ್ದಾರೆ.