ಕಾನೂನು ಸಚಿವರ ರಾಜೀನಾಮೆಗೆ ಆಗ್ರಹಿಸಿ 2000 ಮಂದಿ ಪ್ರತಿಭಟನಾಕಾರರು, ಇಸ್ಲಾಮಾಬಾದ್‌ಗೆ ಸಂಪರ್ಕ ಕಲ್ಪಿಸುವ 2 ಹೆದ್ದಾರಿಗಳನ್ನು 2 ವಾರಗಳಿಂದ ಒತ್ತೆ ಇಟ್ಟುಕೊಂಡಿದ್ದಾರೆ.
ಇಸ್ಲಾಮಾಬಾದ್ (ನ.26): ಕಂಡು ಕೇಳರಿಯದ ಪ್ರತಿಭಟನೆಯೊಂದಕ್ಕೆ ಪಾಕಿಸ್ತಾನ ಸಾಕ್ಷಿಯಾಗಿದೆ. ಕಾನೂನು ಸಚಿವರ ರಾಜೀನಾಮೆಗೆ ಆಗ್ರಹಿಸಿ 2000 ಮಂದಿ ಪ್ರತಿಭಟನಾಕಾರರು, ಇಸ್ಲಾಮಾಬಾದ್ಗೆ ಸಂಪರ್ಕ ಕಲ್ಪಿಸುವ 2 ಹೆದ್ದಾರಿಗಳನ್ನು 2 ವಾರಗಳಿಂದ ಒತ್ತೆ ಇಟ್ಟುಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ತೆರವುಗೊಳಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಪಾಕಿಸ್ತಾನ ಸರ್ಕಾರ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಭಾರಿ ಹಿಂಸಾಚಾರ ನಡೆದಿದ್ದು ನಾಲ್ವರು ಮೃತಪಟ್ಟಿದ್ದಾರೆ.
ಪ್ರವಾದಿ ಮಹಮದರೇ ಅಂತಿಮ ಧರ್ಮಗುರು ಎಂದು ಘೋಷಣೆ ಮಾಡಿಕೊಂಡು ಮತಪಟ್ಟಿಗೆ ಹೆಸರು ಸೇರಿಸಬೇಕು ಎಂಬ ನಿಯಮಕ್ಕೆ ತಿದ್ದುಪಡಿ ತಂದು, ಆ ರೀತಿ ಘೋಷಣೆ ಮಾಡಿಕೊಳ್ಳದವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸುವ ತಿದ್ದುಪಡಿ ತರಲು ಹೊರಟ ಕಾರಣಕ್ಕಾಗಿ ಕಾನೂನು ಮಂತ್ರಿ ಜಾಹೀರ್ ಹಮೀದ್ ರಾಜೀನಾಮೆಗೆ ಕೊಡಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹ. ಇದಕ್ಕಾಗಿ ಇಸ್ಲಾಮಾಬಾದ್ ಎಕ್ಸ್ಪ್ರೆಸ್ ವೇ ಹಾಗೂ ಮುರ್ರೀ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ.
