ಲಾಹೋರ್‌[ಜು.30]: ಹಿಂದೂಗಳ ಆಗ್ರಹದ ಒತ್ತಡಕ್ಕೆ ಕೊನೆಗೂ ಮಣಿದಿರುವ ನೆರೆಯ ಪಾಕಿಸ್ತಾನ 72 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಿಯಾಲ್‌ ಕೋಟ್‌ ನಗರದಲ್ಲಿರುವ 1000ಕ್ಕೂ ಹೆಚ್ಚು ವರ್ಷದ ಪುರಾತನ ಐತಿಹಾಸಿಕ ಶಾವ್ಲಾ ತೇಜ್‌ಸಿಂಗ್‌ ದೇವಸ್ಥಾನವನ್ನು ಸಾರ್ವಜನಿಕರಿಗೆ ಪೂಜೆ ಪುನಸ್ಕಾರಕ್ಕೆ ಮುಕ್ತಗೊಳಿಸಿದೆ.

ಸ್ವಾತಂತ್ರ್ಯೋತ್ತರದ ಅಖಂಡ ಭಾರತದಿಂದ ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದ ನಂತರ ಈ ದೇವಸ್ಥಾನಕ್ಕೆ ಪಾಕಿಸ್ತಾನ ಸರ್ಕಾರ ಬೀಗ ಜಡಿದಿತ್ತು. ಇದನ್ನು ತೆರವು ಮಾಡಬೇಕೆಂಬ ಇಲ್ಲಿನ ಹಿಂದೂಗಳ ಕೋರಿಕೆಯನ್ನು ಪಾಕಿಸ್ತಾನ ಮನ್ನಿಸಿರಲಿಲ್ಲ. ಈ ಹಿಂದೆ ಇಲ್ಲಿ ಹಿಂದೂ ಸಮುದಾಯದ ವಾಸವಿರದ ಕಾರಣಕ್ಕಾಗಿ ದೇವಸ್ಥಾನದ ಬಾಗಿಲನ್ನು ಬಂದ್‌ ಮಾಡಲಾಗಿತ್ತು.

ಇದೀಗ ಈ ಪ್ರದೇಶದಲ್ಲಿ ಸುಮಾರು 2 ಸಾವಿರ ಮಂದಿ ವಾಸವಾಗಿದ್ದು, ದೇಗುಲದ ಬಾಗಿಲು ತೆರೆದಿದ್ದಕ್ಕೆ ಹರ್ಷಗೊಂಡಿದ್ದಾರೆ. ಅಲ್ಲದೆ, 1992ರ ಭಾರತದ ಬಾಬ್ರಿ ಮಸೀದಿ ಧ್ವಂಸಕ್ಕೆ ಪ್ರತೀಕಾರವಾಗಿ ಸಿಯಾಲ್‌ಕೋಟ್‌ ನಗರದ ದೇವಸ್ಥಾನದ ಮೇಲೆ ಕೆಲ ಕಿಡಿಗೇಡಿಗಳು ದಾಳಿ ಮಾಡಿದ್ದರು. ಆದರೆ, ಇದನ್ನು ಈಗಾಗಲೇ ದುರಸ್ತಿಗೊಳಿಸಲಾಗಿದೆ.