ನವದೆಹಲಿ[ಮಾ.07]: 40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿ, ಬಳಿಕ ಪಾಕ್‌ನ ಜೈಷ್‌ ಉಗ್ರ ನೆಲೆ ಭಾರತದ ವಾಯುದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ನಿರ್ಮಾಣವಾಗಿದ್ದ ಉದ್ವಿಗ್ನ ಸ್ಥಿತಿ ಇನ್ನೇನು ತಣ್ಣಗಾಗುತ್ತಿದೆ ಎನ್ನುವ ಹಂತದಲ್ಲೇ, ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಸೇನಾ ಜಮಾವಣೆ ಹೆಚ್ಚಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.

ಕಾಶ್ಮೀರ ಗಡಿ ನಿಯಂತ್ರಣ ರೇಖೆಯ ಸೂಕ್ಷ್ಮ ಪ್ರದೇಶಗಳು ಮತ್ತು ಆಷ್ಘಾನಿಸ್ತಾನದ ಮುಂಚೂಣಿ ನೆಲೆಗಳ ಬಳಿ ಪಾಕಿಸ್ತಾನ ಹೆಚ್ಚುವರಿ ಯೋಧರನ್ನು ನಿಯೋಜಿಸುತ್ತಿದೆ. ಜೊತೆಗೆ ಆ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹವನ್ನು ಹೆಚ್ಚಿಸಿದೆ ಎಂದು ಸೇನಾ ಪಡೆಯ ಮೂಲಗಳು ತಿಳಿಸಿವೆ.

ಜೈಷ್‌ ಉಗ್ರರ ಮೇಲೆ ದಾಳಿಯ ಬಳಿಕ, ಭಾರತದ ಗಡಿ ಪ್ರದೇಶಗಳ ಮೇಲೆ ಪಾಕಿಸ್ತಾನ ಶೆಲ್‌, ಗುಂಡಿನ ದಾಳಿಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಇಂಥ ಘಟನೆಗಳಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣವೇ ಇಂಥ ದಾಳಿಯನ್ನು ನಿಲ್ಲಿಸುವಂತೆ ಬುಧವಾರವಷ್ಟೇ ಭಾರತೀಯ ಸೇನೆ ಪಾಕಿಸ್ತಾನ ಸೇನೆಗೆ ಕಠಿಣ ಸಂದೇಶ ರವಾನಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ಬೆಳಕಿಗೆ ಬಂದಿದೆ.