ಇಸ್ಲಾಮಾಬಾದ್(ಮಾ.20): ಇಷ್ಟು ದಿನ ಭಾರತ, ಭಾರತೀಯರ ವಿರುದ್ಧ  ಕಿಡಿಕಾರುತ್ತಿದ್ದ ಪಾಕಿಸ್ತಾನ, ಇದೀಗ ಭಾರತದ ಹಿಂದೂಗಳ ವಿರುದ್ಧ ಮಾತನಾಡಿ ತನ್ನ ಸಣ್ಣತನ ಪ್ರದರ್ಶನ ಮಾಡಿದೆ.

ಭಾರತದ ಹಿಂದೂಗಳೇ ನಮಗೆ ಶತ್ರುಗಳು ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಶೇರ್ ಆಜಂ ವಾಜೀರ್ ಹೇಳಿದ್ದಾರೆ. ವಾಜೀರ್ ಹೇಳಿಕೆ ಖಂಡಿಸಿ ಅಲ್ಪಸಂಖ್ಯಾತ ಪ್ರತಿನಿಧಿಗಳಾದ ರವಿ ಕುಮಾರ್ ಮತ್ತು ರಂಜೀತ್ ಸಿಂಗ್ ಪ್ರಾಂತೀಯ ವಿಧಾನಸಭೆಯಿಂದ ಹೊರ ನಡೆದ ಘಟನೆಯೂ ನಡೆದಿದೆ.

ಇನ್ನು ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಯಾಗುತ್ತಿದ್ದಂತೇ ವಾಜೀರ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಅಲ್ಲದೇ ತಾವು ಹಿಂದೂಸ್ಥಾನ ಎಂದು ಹೇಳುವ ಬದಲು ಹಿಂದೂಗಳು ಎಂದು ಹೇಳಿದ್ದಕ್ಕೆ ಕ್ಷಮೆ ಕೋರಿದ್ದಾರೆ.

ವಾಜೀರ್ ಕ್ಷಮೆಯ ಬಳಿಕ ರವಿ ಕುಮಾರ್ ಮತ್ತು ರಂಜೀತ್ ಸಿಂಗ್ ಅವರನ್ನು ಮರಳಿ ವಿಧಾನಸಭೆಗೆ ಕರೆತರಲಾಯಿತು. ಈ ವೇಳೆ ಮಾತನಾಡಿದ ರವಿ ಕುಮಾರ್ ಭಾರತದೊಂದಿಗೆ ನಮ್ಮ ಭಿನ್ನಾಭಿಪ್ರಾಯ ಇದೆಯೇ ಹೊರತು ಹಿಂದೂಗಳೊಂದಿಗೆ ಅಲ್ಲ ಎಂದು ಹೇಳಿದರು.