ಇಸ್ಲಾಮಾಬಾದ್(ಜು.08): ಪಾಕಿಸ್ತಾನದ ಅತ್ಯಂತ ತೂಕದ ಮನುಷ್ಯ ಎಂದೇ ಖ್ಯತಿಯಾಗಿದ್ದ ನೂರ್-ಉಲ್-ಹಸನ್  ಮೃತಪಟ್ಟಿದ್ದಾರೆ. ಲಾಹೋರ್'ನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದ ಕಾರಣ ಹಸನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೆರೋಬ್ಬರಿ 330 ಕೆಜಿ ತೂಕವಿದ್ದ ಇಲ್ಲಿನ ಸಕಿದಾಬಾದ್’ನ 55 ವರ್ಷದ ನೂರ್-ಉಲ್-ಹಸನ್ ಪಾಕಿಸ್ತಾನದ ಅತ್ಯಂತ ತೂಕದ ವ್ಯಕ್ತಿ ಎಂದೇ ಖ್ಯಾತಿಗಳಿಸಿದ್ದರು. ಇತ್ತೀಚಿಗೆ ಸೇನಾ ಹೆಲಿಕಾಪ್ಟರ್’ನಲ್ಲಿ ಹಸನ್ ಅವರನ್ನು ಲಾಹೋರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಖುದ್ದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಆದೇಶದ ಮೇರೆಗೆ ಹಸನ್ ಅವರನ್ನು ಲಾಹೋರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಬಳಿಕ ಹಸನ್ ಅವರನ್ನು ತುರ್ತು ನಿಗಾ ಘಟಕ(ICU)ಕ್ಕೆ ಶಿಫ್ಟ್ ಮಾಡಲಾಗಿತ್ತು. ಆದರೆ ICUನಲ್ಲಿದ್ದ ಮಹಿಳಾ ರೋಗಿಯೊಬ್ಬರು ಮೃತಪಟ್ಟ ಕಾರಣಕ್ಕೆ ಆಕೆಯ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಹಸನ್ ಅವರ ಆರೋಗ್ಯ ವಿಚಾರಿಸಬೇಕಿದ್ದ ವೈದ್ಯರೂ ಕೂಡ ನಿರ್ಲಕ್ಷ್ಯ ತೋರಿದ ಪರಿಣಾಮ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಹಸನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.