ಪೇಶಾವರ[ಜ.04]: ವಾಯವ್ಯ ಪಾಕಿಸ್ತಾನದ ಖೈಬರ್‌ ಪಖ್ತೂನ್‌ಖ್ವಾ ಸರ್ಕಾರ ಪುರಾತನ ಹಿಂದು ಧಾರ್ಮಿಕ ಸ್ಥಳ ಪಂಜ್‌ ತೀರತ್‌ ಅನ್ನು ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಿದೆ. ಐದು ನೀರಿನ ಕೊಳಗಳಿಂದಾಗಿ ಇದಕ್ಕೆ ಪಂಜ್‌ ತೀರತ್‌ ಎಂಬ ಹೆಸರು ಬಂದಿದೆ.

ಇಲ್ಲಿ ಒಂದು ದೇವಾಲಯ ಮತ್ತು ಖರ್ಜೂರದ ಮರಗಳನ್ನು ಹೊಂದಿರುವ ಹುಲ್ಲುಗಾವಲು ಸಹ ಇದೆ. ಈ ತಾಣ ಸದ್ಯ ಚಾಚಾ ಯೂನಸ್‌ ಪಾಕ್‌ನ ವ್ಯಾಪ್ತಿಗೆ ಒಳಪಟ್ಟಿದೆ. ಮಹಾಭಾರತದ ಪಾಂಡು ಮಹಾರಾಜನಿಗೆ ಈ ಸ್ಥಳ ಸೇರಿದ್ದಾಗಿತ್ತು. ಕಾರ್ತೀಕ ಮಾಸದ ಅವಧಿಯಲ್ಲಿ ಆತ ಪಂಜ್‌ ತೀರತ್‌ಗೆ ಭೇಟಿ ನೀಡಿ ಎರಡು ದಿನ ಪೂಜೆ ಸಲ್ಲಿಸುತ್ತಿದ್ದ ಎಂಬ ಪ್ರತೀತಿ ಇದೆ.

ಅಷ್ಘಾನ್‌ ದುರ್ರಾನಿ ಸಾಮ್ರಾಜ್ಯದ ಅವಧಿಯಲ್ಲಿ ಪಂಜ್‌ ತೀರತ್‌ಗೆ ಹಾನಿ ಸಂಭವಿಸಿತ್ತು. ಬಳಿಕ ಸಿಖ್‌ ಆಡಳಿತದ ಅವಧಿಯಲ್ಲಿ ಮರುಸ್ಥಾಪಿಸಲಾಗಿತ್ತು. ಪಂಜ್‌ ತೀರತ್‌ ಅಭಿವೃದ್ಧಿಗೆ ಸರ್ಕಾರ 20 ಲಕ್ಷ ರು. ಮೀಸಲಿಟ್ಟಿದೆ. ಅಲ್ಲದೇ ಈ ತಾಣವನ್ನು ನಾಶ ಮಾಡಲು ಯತ್ನಿಸಿದ್ದು ಕಂಡು ಬಂದರೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.