ಪಾಕ್‌ನಿಂದ ಯುದ್ಧ ಸಿದ್ಧತೆ ಗಡಿಗೆ ಯುದ್ಧ ಸಲಕರಣೆ ಸಾಗಣೆ | ಸೇನಾಧಿಕಾರಿಗಳ ರಜೆ ರದ್ದು |  ವೈದ್ಯಕೀಯ ಸಲಕರಣೆ ಸಿದ್ಧವಾಗಿಡಲು ಆಸ್ಪತ್ರೆಗಳಿಗೂ ಪತ್ರ

ಜಮ್ಮು (ಫೆ. 23): 40 ಮಂದಿ ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ತನ್ನ ಮೇಲೆ ಎರಗಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ, ಗಡಿ ನಿಯಂತ್ರಣ ರೇಖೆಯಲ್ಲಿ ಶಂಕಾಸ್ಪದ ನಡವಳಿಕೆ ಪ್ರದರ್ಶಿಸುತ್ತಿದೆ. ಒಂದು ವೇಳೆ ಭಾರತ ಏನಾದರೂ ಯುದ್ಧ ಸಾರಿದರೆ, ಅದನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ಯೋಧರು ದಾಳಿಗೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರದಿಂದ ಇರುವಂತೆ ತನ್ನ ಸೈನಿಕರಿಗೆ ಪಾಕಿಸ್ತಾನ ಸೂಚನೆ ನೀಡಿದೆ. ಸೇನಾಧಿಕಾರಿಗಳು ಹಾಗೂ ಸೇನಾ ಪಡೆಗಳ ರಜೆಗಳನ್ನು ಏಕಾಏಕಿ ರದ್ದುಗೊಳಿಸಿದೆ. ಸೇನಾ ಸಲಕರಣೆಗಳನ್ನು ಗಡಿಭಾಗಕ್ಕೆ ಸಾಗಣೆ ಮಾಡುತ್ತಿದೆ. ಗಡಿ ನಿಯಂತ್ರಣಾ ರೇಖೆಯಲ್ಲಿರುವ ಗ್ರಾಮಸ್ಥರನ್ನು ತೆರವುಗೊಳಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ. ಗುಂಪಾಗಿ ಓಡಾಡದಂತೆ ರಾತ್ರಿಯ ವೇಳೆ ಅನಗತ್ಯವಾಗಿ ದೀಪಗಳನ್ನು ಬೆಳಗದಂತೆ ಜನರಿಗೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬಲೂಚಿಸ್ತಾನದ ಕ್ವೆಟ್ಟಾಸರಕು ಸಾಗಣೆ ಪ್ರಾಂತ್ಯದಲ್ಲಿರುವ ಜಿಲಾನಿ ಆಸ್ಪತ್ರೆಗೆ ಫೆ.20ರಂದು ಪತ್ರವೊಂದನ್ನು ಬರೆದಿರುವ ಪಾಕಿಸ್ತಾನ ಸೇನೆ, ಭಾರತದ ಜೊತೆ ಯುದ್ಧ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಕರಣೆಗಳು ಲಭ್ಯವಿರುವಂತೆ ನೋಡಿಕೊಳ್ಳುವಂತೆ ಸೂಚಿಸಿದೆ.