ಕಳೆದ ತಿಂಗಳು ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡುವುದಾಗಿ ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿತ್ತು. ಆದರೆ ಭದ್ರತೆಯ ಹಿತದೃಷ್ಟಿಯಿಂದ ಭೇಟಿಗೆ ನಿರಾಕರಿಸಲಾಗಿತ್ತು.

ನವದೆಹಲಿ(ಡಿ.08): ಗುಪ್ತಚರ ಆರೋಪದಲ್ಲಿ ಪಾಕ್'ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರಿಗೆ ತಾಯಿ ಹಾಗೂ ಪತ್ನಿಯನ್ನು ಭೇಟಿ ಮಾಡಲು ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದೆ.

ಡಿಸೆಂಬರ್ 25ರಂದು ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಪಾಕ್'ನ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮದ್ ಫೈಸಲ್ ತಿಳಿಸಿದ್ದಾರೆ.

47 ವರ್ಷದ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಏಪ್ರಿಲ್'ನಲ್ಲಿ ಭಯೋತ್ಪಾದನೆ ಹಾಗೂ ಬೇಹುಗಾರಿಕೆ ಆರೋಪದಡಿ ಗಲ್ಲುಶಿಕ್ಷೆ ವಿಧಿಸಲಾಗಿದೆ. ಕಳೆದ ತಿಂಗಳು ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡುವುದಾಗಿ ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿತ್ತು. ಆದರೆ ಭದ್ರತೆಯ ಹಿತದೃಷ್ಟಿಯಿಂದ ಭೇಟಿಗೆ ನಿರಾಕರಿಸಲಾಗಿತ್ತು.

ಬಲೂಚಿಸ್ತಾನದಲ್ಲಿ ಬೇಹುಗಾರಿಕೆ ಹಾಗೂ ಭಯೋತ್ಪಾದನಾ ಕೃತ್ಯ ಎಸಗಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕ್ ಆರೋಪವನ್ನು ಭಾರತ ತಳ್ಳಿಹಾಕಿ ಅಂತರರಾಷ್ಟ್ರೀಯ ನ್ಯಾಯಾಲಯದ ಮೋರೆ ಹೋಗಿತ್ತು. ಭಾರತದ ಮನವಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಶಿಕ್ಷೆಯನ್ನು ತಡೆಯಿಡಿಯುವಂತೆ ತೀರ್ಪು ನೀಡಿತ್ತು.