ಅಮೃತಸರ್(ಜು.14): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಮತ್ತು ಒಸಿಐ ಕಾರ್ಡ್ ಹೊಂದಿರುವವರಿಗೆ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ವೀಸಾ ರಹಿತವಾಗಿ ವರ್ಷವಿಡೀ ಪ್ರಯಾಣಿಸಲು ಅವಕಾಶ ನೀಡಲು ಪಾಕಿಸ್ತಾನ ಭಾನುವಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ.

ಪ್ರತಿದಿನ 5,000 ಯಾತ್ರಾರ್ಥಿಗಳಿಗೆ ಒಬ್ಬೊಬ್ಬರಾಗಿ ಅಥವಾ ಗುಂಪುಗಳಾಗಿ ಗುರುದ್ವಾರವನ್ನು ಕಾಲ್ನಡಿಗೆಯಲ್ಲಿ ಭೇಟಿ ಮಾಡಲು ಅವಕಾಶ ನೀಡಲಾಗುವುದು ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ಆಂತರಿಕ ಭದ್ರತೆ) ಎಸ್.ಸಿ.ಎಲ್ ದಾಸ್ ಹೇಳಿದ್ದಾರೆ. 

ಅಂತಾರಾಷ್ಟ್ರೀಯ ಗಡಿ ವಾಘಾದಲ್ಲಿ ನಡೆದ ಎರಡನೇ ಜಂಟಿ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಸಭೆಯ ಬಳಿಕ ಈ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ವಿಶೇಷ ಸಂದರ್ಭದಲ್ಲಿ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ 10,000 ಹೆಚ್ಚುವರಿ ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಬೇಕೆಂದು ಭಾರತ ಬೇಡಿಕೆ ಇಟ್ಟಿದೆ.

ರಾವಿ ಪ್ರದೇಶದಲ್ಲಿನ ಪಾಕಿಸ್ತಾನದ ನರೋವಾಲ್ ಜಿಲ್ಲೆಯ ಕರ್ತಾರ್‌ಪುರ ದೇಗುಲ ಸಿಖ್ಖರ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ. ಈ ಸ್ಥಳದಲ್ಲಿ ಸಿಖ್ಖರ ಪವಿತ್ರ ಗುರು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ತಮ್ಮ ಅಂತಿಮ ದಿನಗಳನ್ನು ಕಳೆದಿದ್ದರು. 

ಇದು ಗುರುದಾಸ್‌ಪುರದ ಡೇರಾ ಬಾಬಾ ನಾನಕ್ ದೇವಾಲಯದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ.