ನವದೆಹಲಿ[ನ.23]: ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಳಸಿರುವ ಭಾರತ- ಪಾಕಿಸ್ತಾನ ಸಂಬಂಧ ಸುಧಾರಣೆಯಾಗುವ ಸುಳಿವು ಗುರುವಾರ ಲಭ್ಯವಾಗಿದೆ. ಸಿಖ್‌ ಧರ್ಮ ಸಂಸ್ಥಾಪಕ ಗುರು ನಾನಕ್‌ ದೇವ್‌ ಅವರ 550ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತೆ ತನ್ನ ನೆಲದಲ್ಲಿರುವ ಗುರುನಾನಕ್‌ ಅವರ ಸಮಾಧಿ ಸ್ಥಳ ಕರ್ತಾರ್‌ಪುರ ಸಾಹಿಬ್‌ಗೆ ತೆರಳುವ ಹಾದಿಯನ್ನು ಭಾರತೀಯ ಸಿಖ್ಖರಿಗೆ ಮುಕ್ತಗೊಳಿಸುವುದಾಗಿ ಪಾಕಿಸ್ತಾನ ಘೋಷಿಸಿದೆ.

ವಿಶೇಷವೆಂದರೆ, ಪಂಜಾಬ್‌ನ ಗುರುದಾಸ್‌ಪುರದಲ್ಲಿರುವ ಡೇರಾ ಬಾಬಾ ನಾನಕ್‌ನಿಂದ ಅಂತಾರಾಷ್ಟ್ರೀಯ ಗಡಿವರೆಗೆ ನಾವು ಕಾರಿಡಾರ್‌ ಅಭಿವೃದ್ಧಿಪಡಿಸುತ್ತೇವೆ. ಗಡಿಯಾಚೆಯಿಂದ ಕರ್ತಾರ್‌ಪುರವರೆಗೆ ನೀವೂ ಕಾರಿಡಾರ್‌ ಅಭಿವೃದ್ಧಿ ಮಾಡಿ ಎಂದು ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಗುರುವಾರವಷ್ಟೇ ಸಲಹೆ ಮಾಡಿತ್ತು. ಇದಾದ ಬೆನ್ನಲ್ಲೇ ಸಿಖ್‌ ಭಕ್ತರಿಗೆ ಗುರು ನಾನಕ್‌ರ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ.

ಗಡಿಯಲ್ಲಿ ಕಾಣುತ್ತೆ, ಹೋಗಲು ಆಗದು:

ಸಿಖ್‌ ಧರ್ಮ ಸಂಸ್ಥಾಪಕ ಗುರು ನಾನಕ್‌ ಅವರ ಸಮಾಧಿ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ನರೋವಲ್‌ ಜಿಲ್ಲೆಯಲ್ಲಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ನಿಂತರೆ ಸಮಾಧಿ ಇರುವ ಕರ್ತಾರ್‌ಪುರ ಗುರುದ್ವಾರ ಕಾಣುತ್ತದೆ. ಆದರೆ ಅಲ್ಲಿಗೆ ಹೋಗಲು ಸಿಖ್ಖರು ಪಾಕಿಸ್ತಾನದ ವೀಸಾಗೆ ಅರ್ಜಿ ಸಲ್ಲಿಸಬೇಕು. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ಸಿಗ, ಮಾಜಿ ಕ್ರಿಕೆಟಿಗ ನವಜೋತ್‌ ಸಿಧು ಅವರು ಕರ್ತಾರ್‌ಪುರ ಕಾರಿಡಾರ್‌ ಅನ್ನು ಪಾಕಿಸ್ತಾನ ತೆರೆಯಲಿದೆ ಎಂದು ಘೋಷಿಸಿದ್ದರು.

ಕರ್ತಾರ್‌ಪುರ ಸಾಹಿಬ್‌ ಹಾಗೂ ಗುರುದಾಸ್‌ಪುರದ ಡೇರಾ ಬಾಬಾ ನಾನಕ್‌ ನಡುವೆ ನೇರ ಕಾರಿಡಾರ್‌ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಉಭಯ ದೇಶಗಳ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಡೇರಾ ಬಾಬಾ ನಾನಕ್‌ ಬಳಿ ಬೃಹತ್‌ ಸಾಮರ್ಥ್ಯದ ಟೆಲಿಸ್ಕೋಪ್‌ ಅಳವಡಿಸಿ, ಕರ್ತಾರ್‌ಪುರ ಸಾಹಿಬ್‌ ದರ್ಶನ ಮಾಡಿಸಿಕೊಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.