ಬಂಧಿಸಿದ್ದೆವು ಎಂಬ ಪಾಕ್ ಹೇಳಿಕೆ ಸುಳ್ಳು | ಇರಾನ್'ನಲ್ಲಿ ಅಪಹೃತರಾಗಿದ್ದ ಜಾಧವ್

ನವದೆಹಲಿ: ಪಾಕಿಸ್ತಾನದಲ್ಲಿ ಭಾರತದ ಗೂಢಚಾರ ಎಂಬ ಕಾರಣಕ್ಕೆ ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ ಜಾಧವ್‌ರನ್ನು ಕಳೆದ ವರ್ಷ ಮಾಚ್‌ರ್‍ 3ಕ್ಕೆ ತಾನು ಬಂಧಿಸಿದ್ದೆ ಎಂಬ ಪಾಕ್‌ ಸರ್ಕಾರದ ಹೇಳಿಕೆ ಕಟ್ಟುಕತೆ ಎಂಬುದು ಈಗ ಸಾಬೀತಾಗಿದೆ.

ಜಾಧವ್‌ ಬಂಧನದ ಸುದ್ದಿ ಹೊರಬಂದ 1 ತಿಂಗಳ ನಂತರ, ಅಂದರೆ ಏ.2ರಂದು ಆಷ್ಘಾನಿಸ್ತಾನ ಪತ್ರಕರ್ತ ಮಲಿಕ್‌ ಅಚಕ್‌ಝೈ ಎಂಬುವರು ಟ್ವೀಟ್‌ ಮಾಡಿ, ‘ಪಾಕಿಸ್ತಾನವು ಭಾರತದ ಗುಪ್ತಚರನೊಬ್ಬನನ್ನುಬಂಧಿಸಿದ್ದೇವೆ ಎಂದು ನೀಡಿದ ಹೇಳಿಕೆ ಸುಳ್ಳು. ಇರಾನ್‌ನ ಕಳ್ಳಸಾಗಣೆದಾರರು ಅವರನ್ನು ಅಪಹರಿಸಿ ಮಾರಾಟ ಮಾಡಿದ್ದಾರೆ' ಎಂದಿದ್ದರು.

ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಗುಂಟೇರ್‌ ಮುಲಾಕ್‌ ಎಂಬುವರು ‘ಡಾನ್‌' ದೈನಿಕಕ್ಕೆ ಹೇಳಿಕೆ ನೀಡಿ, ‘ಬಲೂಚಿಸ್ತಾನದಲ್ಲಿ ಇತ್ತೀಚೆಗೆ ಬಂಧಿತನಾದ ಭಾರತದ ಗೂಢಚಾರ, ತಾಲಿಬಾನ್‌ನಿಂದ ಬಂಧಿಸಲ್ಪಟ್ಟಿದ್ದ. ಬಳಿಕ ಪಾಕ್‌ ಗುಪ್ತಚರ ದಳಕ್ಕೆ (ಐಎಸ್‌ಐಗೆ) ಆತನನ್ನು ಮಾರಾಟ ಮಾಡಲಾಯಿತು' ಎಂದಿದ್ದರು. ಹೀಗಾಗಿ ಪಾಕ್‌ ನೆಲದಲ್ಲಿ ಜಾಧವ್‌ ಬಂಧಿಸಿದ್ದೆವು ಎಂಬ ಪಾಕ್‌ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದ್ದು ಎಂಬುದು ಇದರಿಂದ ವಿದಿತವಾಗಿದೆ.