ಜಮ್ಮು ಮತ್ತು ಕಾಶ್ಮೀರ(ಸೆ.20): ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಉಗ್ರರ ದಾಳಿ ಪ್ರಕರಣ ಕುರಿತು ಪಾಕ್ ಮಾಧ್ಯಮಗಳು ಭಾರತವನ್ನೇ ಟೀಕಿಸಿವೆ. ಉರಿ ಸೆಕ್ಟರ್ನಲ್ಲಿ ಉಗ್ರರ ದಾಳಿಯಲ್ಲಿ 18 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ ಎಂಬುದು ಭಾರತದ ಮತ್ತೊಂದು ನಾಟಕ ಎಂದು ಪಾಕಿಸ್ತಾನ ಪತ್ರಿಕೆ ತನ್ನ ಅಂತಾರಾಷ್ಟ್ರೀಯ ಸುದ್ದಿ ಪುಟದಲ್ಲಿ ಪ್ರಕಟಿಸಿದೆ.

ಭಾರತವೇ ತನ್ನ ಯೋಧರ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ವಿರುದ್ಧ ಆರೋಪ ಮಾಡ್ತಿದೆ. ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಭಾರತ ಮಾಡ್ತಿರೋ ಡ್ರಾಮಾ ಎಂದು ಹೇಳಿದೆ. ವಂಚಕ ಭಾರತೀಯ ಮಾಧ್ಯಮಗಳು ಪಾಕಿಸ್ತಾನ ಹೆಸರು ಕೆಡಿಸಲು ಮಾಡುತ್ತಿರುವ ಕುತಂತ್ರ ಎಂದು ಪತ್ರಿಕೆಯಲ್ಲಿ ಭಾರತೀಯ ಮಾಧ್ಯಮಗಳನ್ನು ನಿಂದಿಸಲಾಗಿದೆ.
ಸಿಖ್ ಸಮುದಾಯದ ಪ್ರಾಬಲ್ಯವಿರುವ ಸೇನಾ ನೆಲೆ ಭಾರತದ ಗುರಿಯಾಗಿತ್ತು. ಮುಸ್ಲಿಮರು ಮತ್ತು ಸಿಖ್ರನ್ನು ಭಾರತ ವಿಭಜಿಸುತ್ತಿದೆ. ಕಾಶ್ಮೀರದಲ್ಲಿ ಹೋರಾಟ ನಡೆಸುತ್ತಿರುವ ಮುಸ್ಲಿಮರಿಗೆ ಬೆಂಬಲ ನೀಡುವುದನ್ನು ಭಾರತ ನಿಲ್ಲಿಸಬೇಕು ಎಂದು ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿ ಬರೆಯಲಾಗಿದೆ. ಭಾರತ ಮತ್ತು ಪಾಕಿಸ್ತಾನ ಸಂಬಂಧಗಳು ಅಪಾಯಕಾರಿ ಮಟ್ಟ ತಲುಪಿವೆ ಎಂದು ಹೇಳಿದೆ.
ಇನ್ನೊಂದೆಡೆ ಸಾರ್ಕ್ ಸಮ್ಮೇಳನ ಹಿನ್ನೆಲೆಯಲ್ಲಿ ನ್ಯೂಯಾರ್ಕ್ಗೆ ತೆರಳಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಉರಿ ಸೆಕ್ಟರ್ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಉರಿ ಪ್ರಕರಣ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ನವಾಜ್ ಷರೀಫ್ ಉತ್ತರಿಸದೇ ತೆರಳಿದ್ದಾರೆ.
