ಅಖೀದತ್ ನವೀದ್ ಇಂತಹ ಪತ್ರಗಳನ್ನು ಬರೆಯುತ್ತಿರುವುದು ಇದೇ ಮೊದಲಲ್ಲ. ಈಕೆಯ ಪತ್ರಗಳು ಪಾಕ್ ಮಾಧ್ಯಮಗಳಲ್ಲಿ ತಕ್ಕಮಟ್ಟಿಗೆ ಸುದ್ದಿಯಾಗುತ್ತವೆ.

ನವದೆಹಲಿ(ಮಾ. 16): ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ವಾತಾವರಣಕ್ಕೆ ಕಾಯಕಲ್ಪ ಹಾಕಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ 11 ವರ್ಷದ ಬಾಲಕಿ ಅಖೀದತ್ ನವೀದ್ ಮನವಿ ಮಾಡಿಕೊಂಡಿದ್ದಾಳೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಗೆಲುವಿಗೆ ಮೋದಿಯವರನ್ನು ಅಭಿನಂದಿಸಿರುವ ಈ ಹುಡುಗಿ, ಸ್ನೇಹ ಮತ್ತು ಶಾಂತಿಯಿಂದ ಇನ್ನಷ್ಟು ಚುನಾವಣೆಗಳನ್ನು ಗೆಲ್ಲಬಹುದೆಂದು ಸಲಹೆ ನೀಡಿದ್ದಾಳೆ. ಮಾರ್ಚ್ 13ರಂದು ಕೈಯಲ್ಲಿ ಬರೆದ ಎರಡು ಪುಟಗಳ ಪತ್ರಗಳಲ್ಲಿ ಆಕೆ ಶಾಂತಿ ಸಂದೇಶ ರವಾನಿಸಿದ್ದಾಳೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಅಖೀದತ್ ನವೀದ್'ಳ ತಂದೆ ಅಹ್ಮದ್ ನವೀದ್ ಅವರು ಪ್ರತಿಷ್ಠಿತ ಆರ್ಟ್ಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ತನ್ನ ಶಾಂತಿ ಸಂದೇಶದ ಪತ್ರಗಳಿಗೆ ತಮ್ಮ ತಂದೆಯೇ ಸ್ಫೂರ್ತಿ ಎಂದು ಹೇಳಿಕೊಳ್ಳುವ 5ನೇ ತರಗತಿಯ ವಿದ್ಯಾರ್ಥಿನಿಯು, ಗನ್'ಗಳನ್ನು ಬಿಟ್ಟು ಬಡವರಿಗೆ ಔಷಧಗಳನ್ನು ಖರೀದಿಸಬೇಕೆಂದು ಭಾರತ, ಪಾಕ್ ದೇಶಗಳಿಗೆ ಮನವಿ ಮಾಡಿಕೊಂಡಿದ್ದಾಳೆ.

ಅಂದಹಾಗೆ, ಅಖೀದತ್ ನವೀದ್ ಇಂತಹ ಪತ್ರಗಳನ್ನು ಬರೆಯುತ್ತಿರುವುದು ಇದೇ ಮೊದಲಲ್ಲ. ಈಕೆಯ ಪತ್ರಗಳು ಪಾಕ್ ಮಾಧ್ಯಮಗಳಲ್ಲಿ ತಕ್ಕಮಟ್ಟಿಗೆ ಸುದ್ದಿಯಾಗುತ್ತವೆ. ಉಗ್ರರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಿದ್ದಕ್ಕೆ ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರಿಗೆ ಅಭಿನಂದನಾ ಪತ್ರವನ್ನು ಈಕೆ ಕಳುಹಿಸಿದ್ದಳು. ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದ ದಯನೀಯ ಪರಿಸ್ಥಿತಿಯನ್ನು ಸುಧಾರಿಸಬೇಕೆಂದು ಕೋರಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದಾಳೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮೊದಲಾದವರಿಗೂ ಈಕೆ ಪತ್ರ ಬರೆದಿದ್ದಾಳೆ. ಪ್ರಧಾನಿ ಮೋದಿಗೂ ಈ ಹಿಂದೆ ಈಕೆ ಪತ್ರ ಬರೆದಿದ್ದುಂಟು. ಈಕೆಗೆ ಮೋದಿ ಗ್ರೀಟಿಂಗ್ ಕಾರ್ಡ್ ಕೂಡ ಕಳುಹಿಸಿದ್ದರು.

ಪ್ರಧಾನಿ ಮೋದಿಗೆ ಅಖೀದತ್ ನವೀದ್ ಬರೆದ ಪತ್ರದಲ್ಲೇನಿದೆ..?

ಪ್ರಿಯ ಮೋದಿ,

ಹೃದಯಗಳನ್ನು ಗೆಲ್ಲುವುದು ಮಹತ್ವದ ಕಾರ್ಯವೆಂದು ನನ್ನ ತಂದೆಯವರು ಒಮ್ಮೆ ಹೇಳಿದ್ದುಂಟು. ನೀವು ಭಾರತೀಯರ ಹೃದಯ ಗೆದ್ದಿದ್ದೀರಿ. ಹೀಗಾಗಿ, ನೀವು ಉತ್ತರಪ್ರದೇಶ ಚುನಾವಣೆಯನ್ನು ಗೆದ್ದಿದ್ದೀರಿ. ಆದರೆ, ನೀವು ಇನ್ನಷ್ಟು ಭಾರತೀಯರ ಮತ್ತು ಪಾಕಿಸ್ತಾನೀಯರ ಮನಸ್ಸುಗಳನ್ನು ಗೆಲ್ಲಬೇಕೆಂದಿದ್ದರೆ ಎರಡೂ ದೇಶಗಳ ಮಧ್ಯೆ ಸ್ನೇಹ ಮತ್ತು ಶಾಂತಿಗೆ ಕ್ರಮ ಕೈಗೊಳ್ಳಿ ಎಂದು ನಾನು ಹೇಳಬಯಸುತ್ತೇನೆ.

ಎರಡೂ ದೇಶಗಳಿಗೆ ಒಳ್ಳೆಯ ಬಾಂಧವ್ಯದ ಅಗತ್ಯವಿದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಶಾಂತಿ ಸೇತು ನಿರ್ಮಿಸೋಣ. ಬುಲೆಟ್'ಗಳ ಬದಲು ಪುಸ್ತಕಗಳನ್ನು ಕೊಳ್ಳೋಣ. ಗನ್'ಗಳ ಬದಲು ಬಡವರಿಗೆ ಔಷಧವನ್ನು ಖರೀದಿಸೋಣ. ಶಾಂತಿಯೋ ಅಥವಾ ಸಂಘರ್ಷವೋ, ಎರಡೇ ಆಯ್ಕೆ ಇರುವುದು.

ಉತ್ತರಪ್ರದೇಶ ಚುನಾವಣೆಯಲ್ಲಿನ ನಿಮ್ಮ ಯಶಸ್ಸಿಗೆ ನನ್ನ ಅಭಿನಂದನೆ.

- ಅಖೀದತ್ ನವೀದ್

-----

Dear Modi,

Once my father told me that winning of hearts is a marvelous job. Perhaps you have won the hearts of Indian people. Therefore you won the election in UP. But I must tell you if you want to win more Indian and Pakistani hearts, you should take step towards friendship and peace.

Both country need good relation. Lets make a peace bridge between India and Pakistan. Lets decide that we will not buy bullets, will buy books. We will not buy the guns, will buy the medicine for poor people.

Choice is our, Peace or Conflict.

I congratulate you for your success in UP election

Take care

Aqeedat Naveed
H-2, St. 7, Millat Park, Khuda Bux, Multhan Road, Lahore, Pakistan.