ಇಸ್ಲಾಮಾಬಾದ್(ಫೆ.27): ಬದ್ಗಾಮ್ ಜಿಲ್ಲೆಯಲ್ಲಿ ಪತನಗೊಂಡ ಭಾರತೀಯ ವಾಯುಸೇನೆಯ ಮಿಗ್-21 ವಿಮಾನವನ್ನು ತಾನೇ ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ.

ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹ್ಮದ್ ಫೈಸಲ್, 'ನಮ್ಮ ಶಕ್ತಿ ಮತ್ತು ನಮ್ಮ ಆತ್ಮಕರಕ್ಷಣೆಗೆ ನಾವು ಬದ್ಧ ಎಂಬುದನ್ನು ತೋರಿಸುವುದು ನಮ್ಮ ಹಕ್ಕು'ಎಂದು ಹೇಳಿದ್ದಾರೆ.

ಇದೇ ವೇಳೆ ಪಾಕ್ ಸೇನಾ ಡಿಜಿ ಮೇಜರ್ ಜನರಲ್ ಆಸಿಫ್ ಗಫೂರ್ ಕೂಡ ಇಂತದ್ದೇ ಹೇಳಿಕೆ ನೀಡಿದ್ದು, ಪಾಕಿಸ್ತಾನ ವಾಯುಪಡೆ ಭಾರತೀಯ ವಾಯುಸೇನೆಗೆ ಸೇರಿದ ಎರಡು ವಿಮಾನಗಳನ್ನು ಹೊಡೆದುರುಳಿಸಿದ್ದು, ಓರ್ವ ಪೈಲೆಟ್ ನನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.

ಗಫೂರ್ ಅವರ ಹೇಳಿಕೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡು ವಿಮಾನಗಳ ಪೈಕಿ ಒಂದನ್ನು 'INDIAN OCCUPIED KASHMIR' ದಲ್ಲಿ ಹೊಡೆದುರುಳಿಸಿರುವುದಾಗಿ ಹೇಳಿದ್ದಾರೆ.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು ಪಾಕಿಸ್ತಾನಕ್ಕೆ ಇಷ್ಟವಿಲ್ಲ, ಆದರೆ ಬಿಗಡಾಯಿಸಿದರೆ ಅದಕ್ಕೆ ನಾವು ಸಿದ್ಧವಿರುವುದಾಗಿ ಪಾಕ್ ಪರೋಕ್ಷವಾಗಿ ಯುದ್ಧದ ಮಾತುಗಳನ್ನಾಡಿದೆ.

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವೊಂದು ಕಾಶ್ಮೀರ ಜನರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯೇ ಈ ಪರಿಸ್ಥಿತಿಗೆ ಕಾರಣ ಎಂದು ಪಾಕಿಸ್ತಾನ ದೂರುವ ದುಸ್ಸಾಹಸ ಮಾಡಿದೆ.