ಜುಲೈ 8 ರಂದು ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ, ಭಾರತೀಯ ಸೇನೆಯಿಂದ ಹತ್ಯೆಗೊಳಗಾದ ಬಳಿಕ ಆರಂಭವಾದ ಪ್ರತಿಭಟನೆ, ಬಂದ್’ಗಳು ಕಾಶ್ಮೀರ ಕಣಿಯಲ್ಲಿ ಇಂದಿಗೂ ಮುಂದುವರೆದಿವೆ
ಶ್ರೀನಗರ (ಅ.26): ಕಾಶ್ಮೀರ ಕಣಿವೆಯಲ್ಲಿ ಶಾಂತಿ ಉಂಟಾಗಲು ಕಾಶ್ಮೀರಿಗಳ ನೋವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ಕಳೆದ ಮೂರು ತಿಂಗಳುಗಳಿಂದ ಕಾಶ್ಮೀರದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ, ಕಣಿವೆಗೆ ಭೇಟಿ ನೀಡಿರುವ 5 ಮಂದಿ ನಿಯೋಗದ ನೇತೃತ್ವವನ್ನು ಯಶ್ವಂತ್ ಸಿನ್ಹಾ ವಹಿಸಿದ್ದಾರೆ.
ಈ ನಿಯೋಗವು, ಪ್ರತ್ಯೇಕತಾವಾದಿಗಳು ಸೇರಿದಂತೆ ಕಾಶ್ಮೀರದ ವಿವಿಧ ನಾಗರಿಕ ಗುಂಪುಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ನಿವೃತ್ತ ಹಿರಿಯ ಅಧಿಕಾರಿ ವಜಾಹತ್ ಹಬೀಬುಲ್ಲಾ, ಮಾಜಿ ಏರ್ ವೈಸ್ ಮಾರ್ಷಲ್ ಕಪಿಲ್ ಕಾಕ್, ಪತ್ರಕರ್ತ ಭಾರತ್ ಭೂಷಣ್ ಹಾಗೂ ಸಾಮಾಜಿಕ ಕಾರ್ಯಕರ್ತ ಸುಶೋಭಾ ಬಾರ್ವೆಯವರು ನಿಯೋಗದ ಇತರ ಸದಸ್ಯರಾಗಿದ್ದಾರೆ.
ಜುಲೈ 8 ರಂದು ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ, ಭಾರತೀಯ ಸೇನೆಯಿಂದ ಹತ್ಯೆಗೊಳಗಾದ ಬಳಿಕ ಆರಂಭವಾದ ಪ್ರತಿಭಟನೆ, ಬಂದ್’ಗಳು ಕಾಶ್ಮೀರ ಕಣಿಯಲ್ಲಿ ಇಂದಿಗೂ ಮುಂದುವರೆದಿವೆ.
ಈ ನಡುವೆ ಸೇನೆ ಹಾಗೂ ಪ್ರತಿಭಟನಕಾರರ ನಡುವೆ ಉಂಟಾದ ಘರ್ಷಣೆಗಳಲ್ಲಿ ಸುಮಾರು 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 12 ಸಾವಿರಕ್ಕಿಂತಲೂ ಹೆಚ್ಚು ಮಂದಿ ಕಿರುಗುಂಡುಗಳಿಂದ ಗಾಯಗೊಂಡಿದ್ದಾರೆ. ಸುಮಾರು 7 ಸಾವಿರಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಕಾಶ್ಮೀರ ಆರ್ಥಿಕ ವೇದಿಕೆ ವರದಿಯ ಪ್ರಕಾರ ಕಳೆದ ಮೂರು ತಿಂಗಳುಗಳಲ್ಲಿ ಕಣಿವೆಯು 10 ಸಾವಿರ ಕೋಟಿಗಿಂತಲೂ ಹೆಚ್ಚು ನಷ್ಟವನ್ನನುಭವಿಸಿದೆ.
