Asianet Suvarna News Asianet Suvarna News

ಸಾವಿರಾರು ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮ ವಿಧಿವಶ

ಸಾಂಪ್ರದಾಯಿಕ ಪದ್ಧತಿಯಲ್ಲಿ ಹೆರಿಗೆ ಮಾಡಿಸುವ ಮೂಲಕ ‘ವೈದ್ಯರತ್ನೆ ಹಾಗೂ ಪ್ರಸೂತಿ ತಜ್ಞೆ’ ಎಂದು ಖ್ಯಾತಿ ಪಡೆದಿದ್ದ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಮಂಗಳವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Padma Shri awardee Sulagitti Narasamma passes away
Author
Bengaluru, First Published Dec 26, 2018, 7:58 AM IST

ಬೆಂಗಳೂರು :  ಸಾವಿರಾರು ಗರ್ಭಿಣಿಯರಿಗೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಹೆರಿಗೆ ಮಾಡಿಸುವ ಮೂಲಕ ‘ವೈದ್ಯರತ್ನೆ ಹಾಗೂ ಪ್ರಸೂತಿ ತಜ್ಞೆ’ ಎಂದು ಖ್ಯಾತಿ ಪಡೆದಿದ್ದ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ (98) ಮಂಗಳವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಈ ಮೂಲಕ ವೈದ್ಯಸೇವೆ ಕೈಗೆಟುಕದ ಕುಗ್ರಾಮಗಳ ಸಾವಿರಾರು ಗರ್ಭಿಣಿಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿ 1,500ಕ್ಕೂ ಹೆಚ್ಚು ಮಕ್ಕಳ ಜನನಕ್ಕೆ ನೆರವಾಗಿದ್ದ ‘ಕರ್ನಾಟಕದ ಮದರ್‌ ತೆರೇಸಾ’ ಖ್ಯಾತಿಯ ನರಸಮ್ಮ ಶಾಶ್ವತವಾಗಿ ಕಣ್ಣು ಮುಚ್ಚಿದ್ದಾರೆ.

ಅ.29ರಂದು ಶ್ವಾಸಕೋಶದ ಸೋಂಕು ಹಾಗೂ ತೀವ್ರ ಉಸಿರಾಟ ತೊಂದರೆ ಸೇರಿದಂತೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ನಗರದ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಮೊದಲು 10 ದಿನ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಟ್ರೈಕ್ಯಾಸ್ಟಮಿ ಚಿಕಿತ್ಸೆ ಸೇರಿದಂತೆ ಅಗತ್ಯವಾದ ಎಲ್ಲಾ ಚಿಕಿತ್ಸೆ ಪಡೆದಿದ್ದರು. ಆದರೆ, ಅವರ ಅನಾರೋಗ್ಯ ಗಂಭೀರವಾದ ಹಿನ್ನೆಲೆಯಲ್ಲಿ ಅ.29ರಂದು ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿ 25 ದಿನದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಳೆದ ಐದು ದಿನಗಳಿಂದ ನರಸಮ್ಮ ಅವರ ಆರೋಗ್ಯ ತುಂಬಾ ಕ್ಷೀಣಿಸಿತ್ತು. ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನರಸಮ್ಮ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು.

ಗಣ್ಯರ ಭೇಟಿ, ಸಂತಾಪ:   ನಿಧನದ ಸುದ್ದಿ ತಿಳಿದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಸೇರಿದಂತೆ ಹಲವರು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವರಾದ ಜಯಮಾಲಾ ಸೇರಿದಂತೆ ಹಲವಾರು ಗಣ್ಯರು ನರಸಮ್ಮ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

15 ಸಾವಿರ ಹೆರಿಗೆ ಮಾಡಿಸಿದ ವೈದ್ಯ ರತ್ನೆ ‘ನರ್ಸಮ್ಮ’:  ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯ ಹೊರತಾಗಿಯೂ ಸಾಂಪ್ರದಾಯಿಕ ಹೆರಿಗೆ ಪದ್ಧತಿಯಲ್ಲಿ 15 ಸಾವಿರ ಹೆರಿಗೆಗಳನ್ನು ಮಾಡಿಸಿದ ಖ್ಯಾತಿ ಸೂಲಗಿತ್ತಿ ನರಸಮ್ಮ ಅವರದ್ದು. ಯಾವ ಶಾಲಾ ಕಲಿಕೆಯೂ ಇಲ್ಲದೆ ವೈದ್ಯ ವಿದ್ಯೆಯನ್ನು ಸಿದ್ಧಿಸಿಕೊಂಡಿದ್ದ ಅವರು 70 ವರ್ಷಗಳ ಕಾಲ ಗರ್ಭಿಣಿ, ಬಾಣಂತಿಯರ ಪಾಲಿಗೆ ಸಾಂತ್ವನ ಕೇಂದ್ರವಾಗಿದ್ದರು. ಸೂಕ್ತ ವೈದ್ಯಕೀಯ ಸೇವೆ ಇಲ್ಲದ ಪಾವಗಡ ತಾಲೂಕು ಹಾಗೂ ಆಂಧ್ರ ಗಡಿ ಭಾಗದ ಗರ್ಭಿಣಿ ಮಹಿಳೆಯರ ಪಾಲಿನ ದೇವರಾಗಿದ್ದ ನರಸಮ್ಮ 12ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಹನ್ನೆರಡು ಮಕ್ಕಳ ತಾಯಿಯಾದರು.

ತನ್ನ ಐದು ಮಕ್ಕಳಿಗೆ ಹೆರಿಗೆ ಮಾಡಿಸಿದ್ದ ಅಜ್ಜಿ ಮರಿಗೆಮ್ಮ ಅವರಿಂದ ಹೆರಿಗೆ ವಿದ್ಯೆ ಕಲಿತಿದ್ದ ನರಸಮ್ಮ ತಮ್ಮ 22ನೇ ವಯಸ್ಸಿನಿಂದ ಹೆರಿಗೆ ಮಾಡಿಸುವ ಕಾರ್ಯ ಪ್ರಾರಂಭಿಸಿದ್ದರು. ಪಾವಗಡದ ಕೃಷ್ಣಪುರ ಎಂಬ ಪುಟ್ಟಗ್ರಾಮದಲ್ಲಿ ಹುಟ್ಟಿಸಾವಿರಾರು ಬದುಕಿಗೆ ಆಸರೆಯಾಗಿದ್ದರು. ಅವರ ಸೇವೆಯಿಂದಾಗಿ ಅವರು ‘ನರ್ಸಮ್ಮ’ ಎಂದೇ ಖ್ಯಾತಿ ಪಡೆದಿದ್ದರು.

ಪದ್ಮಶ್ರೀ ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕೃತೆ:  ನರಸಮ್ಮ ಅವರ ಸಾಧನೆಗೆ ಭಾರತ ಸರ್ಕಾರವು 2018ರಲ್ಲಿ ಪದ್ಮಶ್ರೀ ನೀಡಿ ಗೌರವಿಸಿದೆ. ಜತೆಗೆ ಭಾರತ ಸರ್ಕಾರದ ವಯೋಶ್ರೇಷ್ಠ ಸನ್ಮಾನ್‌ ರಾಷ್ಟ್ರಪ್ರಶಸ್ತಿ, ವೈದ್ಯರತ್ನ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಡಿ.ದೇವರಾಜು ಅರಸು ಪ್ರಶಸ್ತಿ, ಇಂದಿರಾಗಾಂಧಿ ರಾಜ್ಯ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಮದರ್‌ ತೆರೇಸಾ ಪ್ರಶಸ್ತಿ, ಗಡಿನಾಡು ರತ್ನ ಪ್ರಶಸ್ತಿ, ಮಹಿಳಾ ಸಾಧಕಿ ಪ್ರಶಸ್ತಿ, ಪ್ರಸೂತಿ ಪ್ರವೀಣೆ, ಮಹಾನ್‌ ತಾಯಿ ಸೇರಿದಂತೆ ನೂರಾರು ಪ್ರಶಸ್ತಿಗಳು ಅವರನ್ನು ಅರಿಸಿಕೊಂಡು ಬಂದಿದ್ದವು.

ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ಅವರು ನನ್ನ ಜಿಲ್ಲೆಯಾದ ತುಮಕೂರಿನ ಪಾವಗಡ ತಾಲೂಕಿನವರು. ವೈದ್ಯಕೀಯ ಲೋಕವೇ ಬೆರಗಾಗುವ ರೀತಿಯಲ್ಲಿ ಈ ಭಾಗದ ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದರು. ಅವರ ನಿಧನದ ಸುದ್ದಿ ತಿಳಿದು ತೀವ್ರ ಬೇಸರವಾಗುತ್ತಿದೆ. ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೆ. ಅವರ ಅಗಲಿಕೆ ನಮ್ಮೆಲ್ಲರ ದುರ್ದೈವ.

- ಡಾ.ಜಿ. ಪರಮೇಶ್ವರ್‌, ಉಪಮುಖ್ಯಮಂತ್ರಿ

ವೈದ್ಯಕೀಯ ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲಿ ವಿರಳವಾಗಿದ್ದ ಕಾಲದಲ್ಲಿ ವೈದ್ಯಕೀಯ ಲೋಕವೇ ಬೆರಗಾಗುವ ರೀತಿಯಲ್ಲಿ ಸಾವಿರಾರು ಹೆರಿಗೆ ಮಾಡಿಸಿ, ಮಾನವೀಯ ಸೇವೆಯ ಮೂಲಕ ನರಸಮ್ಮ ಗ್ರಾಮೀಣ ಜನತೆಯ ಮನದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ.

- ಡಾ.  ಜಯಮಾಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ

Follow Us:
Download App:
  • android
  • ios