ಚಿದಂಬರಂ ದಿಢೀರ್ ಪರಾರಿ: ದೇಶ ಎದ್ದು ಕುಳಿತಿತು ಹೌಹಾರಿ!
ಐಎನ್‌ಎಕ್ಸ್ ಮಿಡಿಯಾ ಹೌಸ್ ಪ್ರಕರಣ| ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಗೆ ಜಾಮೀನು ನಿರಾಕರಣೆ| ಬಂಧನದ ಭೀತಿಯಲ್ಲಿ ಮನೆಯಿಂದ ಪರಾರಿಯಾಗಿರುವ ಚಿದಂಬರಂ| ಮನೆಗೆ ತಪಾಸಣೆಗಾಗಿ ಅಧಿಕಾರಿಗಳು ಬರುವ ಮೊದಲೇ ಚಿದಂಬರಂ ನಾಪತ್ತೆ| ಚಿದಂಬರಂ ಗೆ ಉರುಳಾಗಿರುವ ಐಎನ್‌ಎಕ್ಸ್ ಮೀಡಿಯಾ ಹೌಸ್ ಪ್ರಕರಣ|
ನವದೆಹಲಿ(ಆ.20): ಐಎನ್‌ಎಕ್ಸ್ ಮಿಡಿಯಾ ಹೌಸ್ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪರಾರಿಯಾಗಿದ್ದಾರೆ.
ತಾವು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿದಂಬರಂ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಚಿದಂಬರಂ ಮನೆಯಲ್ಲಿರದೇ ಇರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಸದ್ಯ ಪಿ.ಚಿದಂಬರಂ ಎಲ್ಲಿದ್ದಾರೆ ಎಂಬುದರ ಕುರಿತು ಮಾಹಿತಿ ಇಲ್ಲವಾದ್ದರಿಂದ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಮುಂದಿನ ಕ್ರಮಗಳ ಕುರಿತು ಚಿಂತಿಸುತ್ತಿದ್ದಾರೆ. ಹೈಕೋರ್ಟ್ ಆದೇಶದ ವಿರುದ್ಧ ಚಿದಂಬರಂ ಸುಪ್ರೀಂ ಮೆಟ್ಟಿಲೇರಿರುವುದು ಕೂಡ ಕುತೂಹಲ ಮೂಡಿಸಿದೆ.
2007ರ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಚಿದಂಬರಂ, ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಲ್ಲಿ ಪ್ರಭಾವ ಬಳಸಿ ಐಎನ್‌ಎಕ್ಸ್ ಮೀಡಿಯಾ ಹೌಸ್‌ಗೆ ನೆರವು ಮಾಡಿಕೊಟ್ಟ ಆರೋಪ ಎದುರಿಸುತ್ತಿದ್ದರು.
305 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಿಬಿಐ ಅಧಿಕಾರಿಗಳು 2007ರಲ್ಲಿ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.