ನವದೆಹಲಿ(ಮಾ.09): ರಫೆಲ್ ಒಪ್ಪಂದದ ಸೂಕ್ಷ್ಮ ದಾಖಲೆಗಳು ಕದಿಯಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಕಳ್ಳತನವಾಗಿಲ್ಲ ಬದಲಿಗೆ ದಾಖಲೆಗಳು ಸೋರಿಕೆಯಾಗಿವೆ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ ಮುಂದೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ನೀಡಿದ ಹೇಳಿಕೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ, ಬಹುಶಃ ದಾಖಲೆಗಳನ್ನು ಕದ್ದಿದ್ದ ಕಳ್ಳ ಎಲ್ಲಾ ದಾಖಲೆಗಳನ್ನು ಮರಳಿ ಕೊಟ್ಟಿರಬಹುದು ಎಂದು ಕಿಚಾಯಿಸಿದ್ದಾರೆ.

‘ಬುಧವಾರ ರಫೇಲ್‌ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ರಕ್ಷ ಣಾ ಸಚಿವಾಲಯದ ಕಚೇರಿಯಿಂದಲೇ ಕಳ್ಳತನವಾಗಿತ್ತು. ಶುಕ್ರವಾರ ಕಳ್ಳತನವಾಗಿರುವ ದಾಖಲೆ ಜೆರಾಕ್ಸ್‌ ಆಗಿತ್ತು. ಬಹುಶಃ ಕಳ್ಳ ಗುರುವಾರ ದಾಖಲೆಯನ್ನು ವಾಪಾಸ್‌ ನೀಡಿರಬೇಕು’ ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ. 

ಬುಧವಾರ ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಅಟಾರ್ನಿ ಜನರಲ್‌ ವೇಣುಗೋಪಾಲ್‌, ರಫೇಲ್‌ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷ ಣಾ ಸಚಿವಾಲಯದ ಕಚೇರಿಯಿಂದಲೇ ಕಳ್ಳತನವಾಗಿವೆ ಎಂದು ಹೇಳಿದ್ದರು.