ಯುಕೆಯ ಆಕ್ಸ್‌'ಫರ್ಡ್ ವಿವಿ ಮೊದಲ ಶ್ರೇಯಾಂಕ ಉಳಿಸಿಕೊಂಡಿದ್ದು, ಕೇಂಬ್ರಿಜ್ ವಿವಿ 4ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ.
ಲಂಡನ್(ಸೆ.07): ಜಗತ್ತಿನ 77 ರಾಷ್ಟ್ರಗಳ 1,000 ಟಾಪ್ ವಿಶ್ವವಿದ್ಯಾಲಯಗಳ ಕುರಿತ ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕ ಬಿಡುಗಡೆಯಾಗಿದ್ದು, ಭಾರತದ ವಿವಿಗಳ ಶ್ರೇಯಾಂಕ ಕುಸಿತವಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ,) 201-250ರ ಪಟ್ಟಿಯಿಂದ, 251-300ರ ಪಟ್ಟಿಗೆ ಇಳಿಕೆಯಾಗಿದೆ. ಐಐಟಿ ದೆಹಲಿ, ಕಾನ್ಪುರ ಮತ್ತು ಮದ್ರಾಸ್ ಕಳೆದ ವರ್ಷವಿದ್ದ 401-500ರ ಪಟ್ಟಿಯಿಂದ 501-600 ರ ಶ್ರೇಯಾಂಕಕ್ಕೆ ಇಳಿಕೆಯಾಗಿವೆ. ಆದರೆ ಭಾರತದ ಬಹುತೇಕ ವಿವಿಗಳು ಸಂಶೋಧನಾ ಆದಾಯ ಮತ್ತು ಗುಣಮಟ್ಟದಲ್ಲಿ ಸುಧಾರಣೆ ಕಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದರೆ ಭಾರತದ ನೆರೆಯ ದೇಶವಾದ ಚೀನಾದ ವಿವಿಗಳ ಶ್ರೇಯಾಂಕಗಳು ಕಳೆದ ವರ್ಷಕ್ಕಿಂತ ಈ ವರ್ಷ ಏರಿಕೆಯಾಗಿವೆ. ಚೀನಾದ ಪೆಕಿಂಗ್ ವಿವಿ 29ರಿಂದ 27ಕ್ಕೆ ಮತ್ತು ತ್ಸಿಂಗುಹಾ 35ರಿಂದ 30 ಕ್ಕೆ ಏರಿಕೆಯಾಗಿವೆ. ಯುಕೆಯ ಆಕ್ಸ್'ಫರ್ಡ್ ವಿವಿ ಮೊದಲ ಶ್ರೇಯಾಂಕ ಉಳಿಸಿಕೊಂಡಿದ್ದು, ಕೇಂಬ್ರಿಜ್ ವಿವಿ 4ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ. ಕ್ಯಾಲಿಫೋರ್ನಿಯಾ ಇನ್ಸ್'ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸ್ಟಾನ್ಫೋರ್ಡ್ ವಿವಿ ತೃತೀಯ ಸ್ಥಾನ ಹಂಚಿಕೊಂಡಿವೆ.
