ಶ್ರೀನಗರ[ಜೂ. 18]  40 ವೀರಯೋಧರ ಮರಣಕ್ಕೆ ಕಾರಣವಾಗಿದ್ದ ಪುಲ್ವಾಮಾ ಉಗ್ರ ದಾಳಿಗೆ ಕಾರು ನೀಡಿದ್ದ ಉಗ್ರ ಸೇನಾ ಪಡೆಗಳ ಕೈಯಲ್ಲಿ ಹತನಾಗಿದ್ದಾನೆ.

ಅನಂತ್‌ನಾಗ್‌ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸೇನಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌-ಇ-ತೋಯ್ಬಾ ಉಗ್ರ ಸಂಘಟನೆಯ ಸಜ್ಜದ್‌ ಮಕ್ಬೂಲ್‌ ಭಟ್‌ ಮತ್ತು ಇನ್ನೋರ್ವ ಪ್ರಮುಖ ಉಗ್ರ ತೌಸಿಫ್ ನನ್ನು ಹತ್ಯೆಗೈಯಲಾಗಿದೆ.

ಪುಲ್ವಾಮಾ ದಾಳಿ ಅಸಲಿ ಸಂಚುಕೋರನೂ ಬಲಿಯಾಗಿದ್ದ!

ಗುಂಡಿನ ಕಾಳಗದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ  ಸಜ್ಜದ್‌ ಭಟ್‌ ಪುಲ್ವಾಮಾ ದಾಳಿ ಕಾರು ಒದಗಿಸಿದ್ದ ಎಂಬುದನ್ನು ಸೇನಾ ಪಡೆಗಳೂ ಬಹಿರಂಗ ಮಾಡಿವೆ.

ಪುಲ್ವಮಾದಲ್ಲಿ ಫೆಬ್ರವರಿ 14 ರಂದು ಸ್ಫೋಟಕ ತುಂಬಿದ್ದ ಕಾರನ್ನು ಸಿಆರ್‌ಪಿಎಫ್ ವಾಹನಕ್ಕೆ ಗುದ್ದಿಸಲಾಗಿತ್ತು. ಭೀಕರ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು.

ಈ ವರ್ಷ ಒಂದರಲ್ಲೇ ಸೇನಾಪಡೆಗಳು 113 ಉಗ್ರರನ್ನು ಪರಲೋಕಕ್ಕೆ ಕಳಿಸಿವೆ. ಪುಲ್ವಾಮಾ ದಾಳಿ ನಂತರ 86 ಉಗ್ರರ ಹತ್ಯೆ ಮಾಡಲಾಗಿದ್ದು ಹೋರಾಟದಲ್ಲಿ 26 ಯೋಧರು ಪ್ರಾಣಕಳೆದುಕೊಂಡಿದ್ದಾರೆ.