ನವದೆಹಲಿ: ಹಜ್ ಸಬ್ಸಿಡಿಯನ್ನು ರದ್ದುಗೊಳಿಸಿರುವ ಕ್ರಮವನ್ನು ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಸ್ವಾಗತಿಸಿದ್ದು,  ಆ ಹಣವನ್ನು ಸಂಪೂರ್ಣವಾಗಿ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ವ್ಯಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

ಹಜ್ ಸಬ್ಸಿಡಿಯನ್ನು ರದ್ದುಗೊಳಿಸುವಂತೆ 2006ರಿಂದಲೇ ನಾನು ಆಗ್ರಹಿಸುತ್ತಾ ಬಂದಿದ್ದೇನೆ. ಆ ಹಣವನ್ನು ಮುಸ್ಲಿಮ್ ಮಕ್ಕಳ, ವಿಶೇಷವಾಗಿ ಹೆಣ್ಮಕ್ಕಳ, ಶಿಕ್ಷಣಕ್ಕಾಗಿ ವ್ಯಯಿಸಬೇಕು. ಆದರೆ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುವ ಅವಶ್ಯಕತೆಯಿಲ್ಲ,  2012ರಲ್ಲೇ ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ, ಎಂದು ಒವೈಸಿ ಹೇಳಿದ್ದಾರೆ.

ರೂ. 2000 ಕೋಟಿಯನ್ನು ಮುಸ್ಲಿಮ್ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ವ್ಯಯಿಸುವ ಮೂಲಕ ಕೇಂದ್ರವು ತನ್ನ ಮಾತಿನಂತೆ ನಡೆದುಕೊಳ್ಳಬೇಕು. ಮೋದಿ ಸರ್ಕಾರವು ಇದನ್ನು ಮಾಡುವುದೇ? 2018-19ರ ಬಜೆಟ್’ನಲ್ಲಿ ನೋಡೋಣ,  ಎಂದು ಒವೈಸಿ ಸವಾಲೆಸೆದಿದ್ದಾರೆ.

ಕೇಂದ್ರ ಸರ್ಕಾರವು ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮುಸ್ಲಿಮರ ಹಜ್​ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದೆ.

​ಈ ನಿರ್ಧಾರವನ್ನು ಇಂದು ಪ್ರಕಟಿಸಿರುವ ಅಲ್ಪಸಂಖ್ಯಾತ ಖಾತೆ ಸಚಿವ ಮುಕ್ತಾರ್​ ಅಬ್ಬಾಸ್​ ನಖ್ವಿ,  ಅಲ್ಪಸಂಖ್ಯಾತ ಮಹಿಳೆಯರ ಶ್ರೇಯೋಭಿವೃದ್ದಿಗೆ ಅದನ್ನು ಬಳಸಿಕೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

ಈ ವರ್ಷದಿಂದಲೇ ಹಜ್​ ಯಾತ್ರೆಗೆ ಈ ನಿರ್ಧಾರವು ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.