ನವದೆಹಲಿ[ಡಿ.30]: ಐದು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರ 2021 ಕೋಟಿ ರು. ವ್ಯಯಿಸಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮೋದಿ ಅವರು 48 ವಿದೇಶ ಪ್ರವಾಸಗಳನ್ನು ಕೈಗೊಂಡು 55 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಬಾಡಿಗೆ ವಿಮಾನ ಸೇವೆ, ವಿಮಾನ ನಿರ್ವಹಣೆ ಹಾಗೂ ಹಾಟ್‌ಲೈನ್‌ ಸೌಲಭ್ಯಕ್ಕಾಗಿ ಅವರಿಗೆ ಈ ಪ್ರವಾಸಗಳ ಸಂದರ್ಭದಲ್ಲಿ 2021 ಕೋಟಿ ರು. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರವೇ ತಿಳಿಸಿದೆ.

2009ರಿಂದ 2014ರವರೆಗೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್‌ ಅವರು 38 ವಿದೇಶ ಪ್ರವಾಸಗಳಲ್ಲಿ 33 ದೇಶಗಳಿಗೆ ಭೇಟಿ ಕೊಟ್ಟಿದ್ದರು. ಅವರ ಒಟ್ಟಾರೆ ಪ್ರವಾಸಕ್ಕೆ 1346 ಕೋಟಿ ರು. ವೆಚ್ಚವಾಗಿತ್ತು ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸಕ್ಕೆ ತೆರಳುವುದರ ಉದ್ದೇಶ, ಅದರಿಂದಾದ ವೆಚ್ಚ ಹಾಗೂ ವಿದೇಶ ಪ್ರವಾಸದ ಬಳಿಕ ಹೂಡಿಕೆ ಎಷ್ಟಾಗಿದೆ ಎಂಬ ಮಾಹಿತಿಯನ್ನು ಕಾಂಗ್ರೆಸ್ಸಿನ ಸಂಸದ ಸಂಜಯ್‌ ಸಿಂಗ್‌ ಅವರು ಕೇಳಿದ್ದರು.

ಹೂಡಿಕೆ ಆಕರ್ಷಣೆ ಹಾಗೂ ಸಂಬಂಧ ಸುಧಾರಣೆ ಸಲುವಾಗಿ ಮೋದಿ ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ. ವಿಮಾನ ನಿರ್ವಹಣೆಗೆ 1583.18 ಕೋಟಿ ರು., ಚಾರ್ಟರ್ಡ್‌ ವಿಮಾನ ಸೇವೆಗೆ 429.25 ಕೋಟಿ ರು. ಹಾಗೂ ಹಾಟ್‌ಲೈನ್‌ಗಾಗಿ 9.11 ಕೋಟಿ ರು. ವೆಚ್ಚವಾಗಿದೆ. ದೇಶದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿರುವ 10 ಪ್ರಮುಖ ದೇಶಗಳಲ್ಲಿ ಮೋದಿ ಅವರು 2014ರಿಂದ ಭೇಟಿ ನೀಡಿದ ದೇಶಗಳೂ ಇವೆ ಎಂದು ಸಚಿವರು ತಿಳಿಸಿದ್ದಾರೆ.