ಜಮ್ಮು[ಆ.08]: ರಾಜ್ಯಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು, ರಾಜ್ಯ ವಿಭಜನೆ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ಎರಡು ದಿನ ಶಾಂತವಾಗಿದ್ದ, ಕಾಶ್ಮೀರದಲ್ಲಿ ಹಿಂಸಾಚಾರದ ಪ್ರಕರಣಗಳು ಆರಂಭವಾಗಿದೆ. ರಾಜ್ಯದ ವಿವಿಧೆಡೆ ಭದ್ರತಾ ಪಡೆಗಳ ಮೇಲೆ ಕಲ್ಲೂ ತೂರಾಟದ ಹಲವು ಪ್ರಕರಣಗಳು ನಡೆದಿವೆ.

ಈ ವೇಳೆ ಶ್ರೀನಗರದಲ್ಲಿ ಕರ್ಫ್ಯೂ ಉಲ್ಲಂಘಿಸಿದ್ದ ಯುವಕನೊಬ್ಬನನ್ನು ಭದ್ರತಾ ಪಡೆಗಳು ಬೆನ್ನಟ್ಟಿದ ವೇಳೆ ಆತ, ಝೀಲಂ ನದಿಗೆ ಹಾರಿ ಸಾವನ್ನಪ್ಪಿದ್ದಾನೆ. ಶ್ರೀನಗರದ ಇತರೆ ಕೆಲವು ಕಡೆ ಹಿಂಸಾಚಾರದಲ್ಲಿ ತೊಡಗಿದ್ದ ಯುವಕರನ್ನು ಚದುರಿಸಲು ಭದ್ರತಾ ಪಡೆಗಳು ಲಾಠಿ ಪ್ರಹಾರ ನಡೆಸಿದ್ದು, ಈ ವೇಳೆ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಕೇಂದ್ರದ ವಿರುದ್ಧ ಸ್ಥಳೀಯ ರಾಜಕೀಯ ನಾಯಕರು ಮತ್ತು ಪ್ರತ್ಯೇಕತಾವಾದಿಗಳು ಸಿಡಿದೇಳಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಭದ್ರತಾ ಪಡೆಗಳು, ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತೆ 100ಕ್ಕೂ ಹೆಚ್ಚು ನಾಯಕರನ್ನು ಮುಂಜಾಗ್ರಾತಾ ಕ್ರಮವಾಗಿ ಬಂಧಿಸಿದ್ದಾರೆ. ಆದರೆ ಬಂಧಿತರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.