‘ನಾನು ಶಾಸಕರ ಜತೆಗೆ ಹೇಗೆ ನಡೆದುಕೊಳ್ಳುತ್ತಿದ್ದೇನೆ. ಎಂತಹ ಬಾಂಧವ್ಯ ಹೊಂದಿದ್ದೇನೆ. ಎಷ್ಟುಸೂಕ್ಷ್ಮತೆಯಿಂದ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸರ್ಕಾರ ಬಿದ್ದು ಹೋಗಲಿದೆ ಎನ್ನುವ ಊಹಾ ಪೋಹಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಬೆಂಗಳೂರು : ‘ಸೆಪ್ಟಂಬರ್‌ 3ರಂದು ಏನಾಗಲಿದೆ ಎಂಬುದು ನನಗೆ ಗೊತ್ತಿದೆ. ಕೆಲವರು ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಕಾಯ್ದು ಕುಳಿತಿದ್ದಾರೆ. ಕೆಲ ಮಾಧ್ಯಮಗಳಂತೂ ಸೆ.3ರಂದು ಹೊಸ ಮುಖ್ಯಮಂತ್ರಿ ಬರುತ್ತಾರಾ ಎಂದು ವರದಿ ಮಾಡಿವೆ. ಆದರೆ, ಈ ಸರ್ಕಾರವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಯಾವ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ. ಸಮ್ಮಿಶ್ರ ಸರ್ಕಾರವನ್ನು ಹೇಗೆ ನಡೆಸಬೇಕು ಎಂಬುದು ನನಗೆ ತಿಳಿದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ವಿರೋಧಿಗಳಿಗೆ ಖಡಕ್‌ ಆಗಿ ತಿರುಗೇಟು ನೀಡಿದ್ದಾರೆ.

ಸಮಾಜ ಸಂಪರ್ಕ ವೇದಿಕೆಯು ಶನಿವಾರ ತುರಹಳ್ಳಿಯ ಭಾರತ್‌ ಹೌಸ್‌ ಬಿಲ್ಡಿಂಗ್‌ ಕೋ ಆಪರೇಟಿವ್‌ ಸೊಸೈಟಿ ಲೇಔಟ್‌ನಲ್ಲಿ ನಿರ್ಮಿಸಿರುವ ಮಹಿಳಾ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಶಾಸಕರ ಜತೆಗೆ ಹೇಗೆ ನಡೆದುಕೊಳ್ಳುತ್ತಿದ್ದೇನೆ. ಎಂತಹ ಬಾಂಧವ್ಯ ಹೊಂದಿದ್ದೇನೆ. ಎಷ್ಟುಸೂಕ್ಷ್ಮತೆಯಿಂದ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಮುಖ್ಯಮಂತ್ರಿ ಖುರ್ಚಿ ಭದ್ರತೆಗೆ ನಾನು ಸಮಯ ವ್ಯರ್ಥ ಮಾಡುವುದಿಲ್ಲ. ಸರ್ಕಾರದ ಶಕ್ತಿ ಏನೆಂಬುದು ನನಗೆ ತಿಳಿದಿದೆ. ಮುಂದೆಯೂ ಈ ಸರ್ಕಾರ ಭದ್ರವಾಗಿರುತ್ತದೆ. ಈ ಹಿಂದೆ ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೆ. ಇಂದು ಕೂಡ ದೇವರ ದಯೆಯಿಂದ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಎಷ್ಟುದಿವಸ ಈ ಹುದ್ದೆಯಲ್ಲಿ ಇರುತ್ತೇನೆ ಎಂಬುವುದನ್ನು ಆ ದೇವರೇ ಬರೆದಿದ್ದಾನೆ. ಎಷ್ಟುದಿವಸ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ಇರುವಷ್ಟುದಿನ ಹೇಗೆ ನಾಡಿನ ಜನರ ಸೇವೆ ಮಾಡುತ್ತೇನೆ ಎಂಬುದು ಮುಖ್ಯ’ ಎಂದು ಕುಮಾರಸ್ವಾಮಿ ನುಡಿದರು.

‘ಶೀಘ್ರದಲ್ಲೇ ಈ ಸರ್ಕಾರ ಬೀಳುತ್ತದೆ. ಸೆ.3ರಂದು ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಕೆಲ ಮಾಧ್ಯಮಗಳಲ್ಲಿ ಸುದ್ದಿ ನೋಡಿದ್ದೇನೆ. ಮಾಧ್ಯಮಗಳು ಹಳದಿ ಕಣ್ಣಿನಲ್ಲಿ ನೋಡುವುದನ್ನು ಬಿಟ್ಟು ಸರ್ಕಾರದ ಉತ್ತಮ ಕೆಲಸಗಳನ್ನು ಪ್ರೋತ್ಸಾಹಿಸಬೇಕು. ಇದರಿಂದ ಮತ್ತಷ್ಟುಕೆಲಸ ಮಾಡಲು ನನಗೆ ಹುಮ್ಮಸು ಬರುತ್ತದೆ’ ಎಂದರು.

ಮನ್ನಾದಿಂದ ರೈತರು ಉಳೀತಾರೆಂಬ ಭ್ರಮೆಯಿಲ್ಲ:

‘ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಾಗ ಕೆಲವರು ರಾಜಕೀಯ ಮಾಡಿದರು. ಒಂದು ರಾಜ್ಯದಲ್ಲಿ 49 ಸಾವಿರ ಕೋಟಿ ರು. ಸಾಲ ಮನ್ನಾ ಮಾಡುವುದು ಸುಲಭವಲ್ಲ. ಸಾಲ ಮನ್ನಾ ಮಾಡಿದ ತಕ್ಷಣ ರೈತರು ಉಳಿಯುತ್ತಾರೆ ಎನ್ನುವ ಭ್ರಮೆಯೂ ಇಲ್ಲ. ಕಳೆದ ಮೂರು ವರ್ಷಗಳಿಂದ ಸತತ ಬರದಿಂದ ರೈತರು ಸಂಕಷ್ಟದಲ್ಲಿದ್ದರು. ಹಾಗಾಗಿ ಅವರ ಕೊಂಚ ನೆರವಾಗುವ ಉದ್ದೇಶದಿಂದ ಸಾಲ ಮನ್ನಾ ಮಾಡಿದ್ದೇನೆ. ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿ ಹೋಗುವುದಿಲ್ಲ. ಆರ್ಥಿಕ ಶಿಸ್ತು ಕಾಪಾಡುವುದರ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಗೊಳಿಸಿ ನಾಡನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತೇನೆ’ ಎಂದು ಹೇಳಿದರು.

ಲೇವಾದೇವಿಗಾರಿಗೆ ಎಚ್ಚರಿಕೆ:

‘ರೈತರು ಆರ್ಥಿಕವಾಗಿ ಸದೃಢವಾಗಬೇಕು. ಸಾಲ ಮನ್ನಾದಿಂದ ಅದು ಸಾಧ್ಯವಿಲ್ಲ. ಕೃಷಿ ಪದ್ಧತಿಗಳು ಬದಲಾಗಬೇಕು. ಹಿಂದೆ ಡಿ.ದೇವರಾಜ ಅರಸು ಅವರು ಋುಣಮುಕ್ತ ಕಾಯ್ದೆ ತಂದಿದ್ದರು. ಇದೀಗ ಅದೇ ಮಾದರಿಯ ಯೋಜನೆ ಜಾರಿಗೊಳಿಸಿದ್ದೇವೆ. ಇದು ರೈತರು ಸೇರಿದಂತೆ ಭೂಮಿ ಇಲ್ಲದವರು, ಹಳ್ಳಿ ಮತ್ತು ನಗರ ಪ್ರದೇಶದ ಬಡ ಕುಟುಂಬಗಳಿಗೆ ಅನ್ವಯವಾಗುತ್ತದೆ. ವಾರ್ಷಿಕ 1.20 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವ ಕುಟುಂಬಗಳು ಖಾಸಗಿಯವರಿಂದ ಪಡೆದಿರುವ ಸಾಲವನ್ನು ಹಿಂದಿರುಗಿಸುವಂತಿಲ್ಲ. ಒಂದು ವೇಳೆ ಲೇವಾದೇವಿಗಾರರು ಒತ್ತಡ ಹಾಕಿದರೆ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿÓಸಲಾಗುತ್ತದೆ’ ಕುಮಾರಸ್ವಾಮಿ ಎಚ್ಚರಿಸಿದರು.