ರಾಜ್ಯದಲ್ಲಿ ಕಳೆದ ಒಂದು ವರ್ಷದ ಹಿಂದೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊಲೀಸರು ಪ್ರತಿಭಟನೆಗೆ ಮುಂದಾದಾಗ ರಾಜ್ಯ ಸರ್ಕಾರವು ವೇತನ-ಭತ್ಯೆ ಏರಿಕೆ ಹಾಗೂ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಆರ್ಡರ್ಲಿ ವ್ಯವಸ್ಥೆಯನ್ನು ರದ್ದುಗೊಳಿಸುವುದಾಗಿ ಹೇಳುವ ಮೂಲಕ ಮನವೊಲಿಸಿತ್ತು. ಚಾಲ್ತಿಯಲ್ಲಿದ್ದ ಆರ್ಡರ್ಲಿ ವ್ಯವಸ್ಥೆ ಪರಿಷ್ಕರಿಸಿ ಆ ಹುದ್ದೆಗಳ ಸಂಖ್ಯೆಯಲ್ಲಿ ಶೇ.50ರಷ್ಟು ಕಡಿತ ಮಾಡಿ ‘ಅನುಯಾಯಿ’ಗಳ (ಫಾಲೋಯರ್ಸ್) ನೇಮಕಕ್ಕೆ ಒಪ್ಪಿಗೆ ನೀಡಿ 2017ರ ಮಾರ್ಚ್ 9ರಂದು ಆದೇಶ ಕೂಡ ಹೊರಡಿಸಿತ್ತು. ಆದರೆ, ಆದೇಶ ಹೊರಡಿಸಿ ಒಂಬತ್ತು ತಿಂಗಳಾಗುತ್ತಿದ್ದರೂ ಕಳೆದರೂ ಆರ್ಡರ್ಲಿ ಬದಲಿಗೆ ‘ಅನುಯಾಯಿ’ಗಳ ನೇಮಕವಾಗಿಲ್ಲ.

ಬೆಂಗಳೂರು(ನ.14): ಬ್ರಿಟಿಷರ ಪಳೆಯುಳಿಕೆಯಾಗಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉಳಿದಿರುವ ‘ಆರ್ಡರ್ಲಿ’ ವ್ಯವಸ್ಥೆಯನ್ನು ರದ್ದುಗೊಳಿಸಿ ಅದರ ಬದಲು ಫಾಲೋಯರ್ಸ್ ನೇಮಕ ಮಾಡುವುದಾಗಿ ಸರ್ಕಾರ ಘೋಷಿಸಿ ಬರೋಬ್ಬರಿ ಎಂಟು ತಿಂಗಳು ಕಳೆದಿವೆ. ಆದರೆ, ಇವತ್ತಿನವರೆಗೂ ಫಾಲೋಯರ್ಸ್ ನೇಮಕವಾಗಿಲ್ಲ ಮತ್ತು ಹಿರಿಯ ಅಧಿಕಾರಿಗಳ ಮನೆಯಲ್ಲಿ ಚಾಕರಿ ಮಾಡುವುದರಿಂದ ಕೆಳ ಹಂತದ ಸಿಬ್ಬಂದಿ (ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್ ಹಾಗೂ ಎಎಸ್‌'ಐ)ಗೆ ಮುಕ್ತಿ ದೊರಕಿಲ್ಲ!

ರಾಜ್ಯದಲ್ಲಿ ಕಳೆದ ಒಂದು ವರ್ಷದ ಹಿಂದೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊಲೀಸರು ಪ್ರತಿಭಟನೆಗೆ ಮುಂದಾದಾಗ ರಾಜ್ಯ ಸರ್ಕಾರವು ವೇತನ-ಭತ್ಯೆ ಏರಿಕೆ ಹಾಗೂ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಆರ್ಡರ್ಲಿ ವ್ಯವಸ್ಥೆಯನ್ನು ರದ್ದುಗೊಳಿಸುವುದಾಗಿ ಹೇಳುವ ಮೂಲಕ ಮನವೊಲಿಸಿತ್ತು. ಚಾಲ್ತಿಯಲ್ಲಿದ್ದ ಆರ್ಡರ್ಲಿ ವ್ಯವಸ್ಥೆ ಪರಿಷ್ಕರಿಸಿ ಆ ಹುದ್ದೆಗಳ ಸಂಖ್ಯೆಯಲ್ಲಿ ಶೇ.50ರಷ್ಟು ಕಡಿತ ಮಾಡಿ ‘ಅನುಯಾಯಿ’ಗಳ (ಫಾಲೋಯರ್ಸ್) ನೇಮಕಕ್ಕೆ ಒಪ್ಪಿಗೆ ನೀಡಿ 2017ರ ಮಾರ್ಚ್ 9ರಂದು ಆದೇಶ ಕೂಡ ಹೊರಡಿಸಿತ್ತು. ಆದರೆ, ಆದೇಶ ಹೊರಡಿಸಿ ಒಂಬತ್ತು ತಿಂಗಳಾಗುತ್ತಿದ್ದರೂ ಕಳೆದರೂ ಆರ್ಡರ್ಲಿ ಬದಲಿಗೆ ‘ಅನುಯಾಯಿ’ಗಳ ನೇಮಕವಾಗಿಲ್ಲ.

ಅನುಯಾಯಿಗಳ ನೇಮಕವಾಗದ ಹೊರತು ಆರ್ಡರ್ಲಿ ವ್ಯವಸ್ಥೆಗೆ ಮುಕ್ತಿ ಇಲ್ಲ. ಒಂದೆಡೆ ಆರ್ಡರ್ಲಿ ವ್ಯವಸ್ಥೆ ರದ್ದುಗೊಳಿಸಿ ಗೃಹ ಇಲಾಖೆ ಆದೇಶ ಹೊರಡಿಸಿದ್ದರೂ ಅಧಿಕಾರಿಗಳು ಮಾತ್ರ ಸಿಬ್ಬಂದಿಯಿಂದ ದುಡಿಸಿಕೊಳ್ಳುವುದನ್ನು ನಿಲ್ಲಿಸಿಲ್ಲ. ರಾಜ್ಯಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಆರ್ಡರ್ಲಿಗಳಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಒಬ್ಬರು ಎಸ್ಪಿ, ಮೂವರು ಡಿವೈಎಸ್ಪಿ ಹಾಗೂ ವಲಯ ಐಜಿಪಿಗಳಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ರಾಜ್ಯ ಮೀಸಲು ಪೊಲೀಸ್ ಪಡೆಯಿಂದ ಆರ್ಡರ್ಲಿಗಳನ್ನು ನೀಡಲಾಗಿದೆ. ಕನಿಷ್ಠ ಎಂದರೂ ಒಂದು ಜಿಲ್ಲೆಯಲ್ಲಿ ಸುಮಾರು 20 ಮಂದಿ ಆರ್ಡರ್ಲಿಗಳು ಹಿರಿಯ ಅಧಿಕಾರಿಗಳ ಮನೆಯಲ್ಲಿ ಚಾಕರಿ ಮಾಡುತ್ತಿದ್ದಾರೆ.

ರಾಜಧಾನಿಯೊಂದರಲ್ಲೇ 105 ಆರ್ಡರ್ಲಿ: ಪ್ರಸ್ತುತ ನಗರ ಸಶಸ್ತ್ರ ಮೀಸಲು ಪಡೆಯಲ್ಲಿ (ಸಿಎಆರ್) 1239 ಸಿಬ್ಬಂದಿಯಿದ್ದು, ಈ ಸಿಬ್ಬಂದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆರ್ಡರ್ಲಿಗಳನ್ನಾಗಿ ನೇಮಿಸಲಾಗಿದೆ. ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳಿಗೆ 105 ಸಿಎಆರ್ ಪೇದೆಗಳು (ಕಾರು ಚಾಲಕ, ಸಹಾಯಕರನ್ನು ಹೊರತುಪಡಿಸಿ) ಆರ್ಡರ್ಲಿಗಳಿದ್ದಾರೆ. ಉಳಿದವರು ಕಾರು ಚಾಲಕ ಹಾಗೂ ಸಹಾಯಕರಾಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದೆ. ಈ ಸಿಬ್ಬಂದಿಗೆ ಗಾರ್ಡ್, ಸೆಂಟ್ರಿ, ಗಣ್ಯ ವ್ಯಕ್ತಿಗಳ ಭದ್ರತೆ, ಚುನಾವಣಾ ಕರ್ತವ್ಯ, ವಿಶೇಷ ಗಸ್ತು, ಡಕಾಯಿತಿ ಪ್ರತಿಬಂಧ ಕಾರ್ಯಾಚರಣೆ ಹಾಗೂ

ನೈಸರ್ಗಿಕ ವಿಕೋಪಗಳಾದ ಪ್ರವಾಹ, ಭೂಕಂಪ ಇತ್ಯಾದಿ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಶ್ಯವಿರುವ ತರಬೇತಿ ನೀಡಲಾಗಿದೆ. ಈ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳಿಗೆ ಆರ್ಡರ್ಲಿಗಳನ್ನಾಗಿ ನೇಮಿಸುವುದರಿಂದ ಅವರಿಗೆ ನೀಡಿದ ತರಬೇತಿ ಕೂಡ ವ್ಯರ್ಥವಾಗುತ್ತಿದೆ. ಪ್ರಸ್ತುತ ಇರುವ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಈ ಸಿಬ್ಬಂದಿಯನ್ನು ಸೇವೆಗೆ ಬಳಸಿಕೊಂಡರೆ ಒತ್ತಡ ಕಡಿಮೆಯಾಗಬಹದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಎಎಸ್‌'ಐ ಮಟ್ಟದ ಆರ್ಡರ್ಲಿ: ಹಿರಿಯ ಅಧಿಕಾರಿಗಳ ಬಳಿ ಇರುವ ಬಹುತೇಕ ಮಂದಿ ಆರ್ಡಲಿಗಳು ಮುಖ್ಯಪೇದೆ ಮತ್ತು ಸಹಾಯಕ ಪೊಲೀಸ್ ಸಬ್‌'ಇನ್ಸ್'ಪೆಕ್ಟರ್ ಮಟ್ಟದವರಾಗಿದ್ದಾರೆ. ಇವರಿಗೆ ನಿಗದಿಪಡಿಸಿದ ಮೂಲ ವೇತನ 18 ಸಾವಿರದಿಂದ 40 ಸಾವಿರವರೆಗಿದೆ. ಹೀಗಾಗಿ ಅಧಿಕಾರಿಗಳ ಮನೆಗೆಲಸಕ್ಕೆ ಲಕ್ಷಾಂತರ ರುಪಾಯಿ ವೇತನ ನೀಡುವಂತಹ ಸ್ಥಿತಿ ಇಲಾಖೆ ಮಾಡುತ್ತಿದೆ. ಪೊಲೀಸ್ ಇಲಾಖೆಯಲ್ಲಿದ್ದು ಸಮಾಜ ಸೇವೆ ಮಾಡಬೇಕೆಂಬ ಕನಸು ಕಟ್ಟಿಕೊಂಡು ಬರುವವರು ಅಧಿಕಾರಿಗಳ ಮನೆಚಾಕರಿ ಮಾಡುತ್ತಿದ್ದಾರೆ. ಅನುಯಾಯಿ ಹುದ್ದೆ ನೇಮಕಾತಿ ಬಗ್ಗೆ ಪ್ರತಿಕ್ರಿಯೆ ಕೇಳಲು ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರನ್ನು ಸಂಪರ್ಕಿಸಿದಾಗ ‘ವಿಧಾನಮಂಡಲ ಅಧಿವೇಶನ ನಡೆಯುವಾಗ ಈ ಮಾಹಿತಿಯನ್ನು ಏಕೆ ಕೇಳುತ್ತಿದ್ದೀರಿ? ಈ ಮಾಹಿತಿಯನ್ನು ನಿಮಗೇಕೆ ನೀಡಬೇಕು? ಹೇಳಲು ಸಾಧ್ಯವಿಲ್ಲ’ ಎಂದಷ್ಟೇ ಹೇಳಿದರು.

ವರದಿ:ಎನ್.ಲಕ್ಷ್ಮಣ್, ಕನ್ನಡಪ್ರಭ