ಇತ್ತೀಚೆಗೆ ಮಾತ್ರ ಪರಿಸ್ಥಿತಿ ಬದಲಾಗಿದ್ದು, ಅಸಹಮತವನ್ನೇ ರಾಷ್ಟ್ರವಿರೋಧಿ ಎಂದು ಪರಿಗಣಿಸಲಾಗುತ್ತಿದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರಿಗೆ ದೇಶ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದರು.
ಬೆಂಗಳೂರು: ಆಡಳಿತ ವಿರೋಧಿ ಧೋರಣೆಯನ್ನು ಅತ್ಯುತ್ತಮವಾದ ರಾಷ್ಟ್ರೀಯತೆಯೆಂದು ಪರಿಗಣಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಸಂಸದ ಶಶಿತರೂರ್ ಅಭಿಪ್ರಾಯಪಟ್ಟರು. ಡಯಲಾಗ್ ಸಂಸ್ಥೆಯು ಶನಿವಾರ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ‘ಸಹಸ್ರಮಾನದ ರಾಜಕೀಯ ಮಾತುಕತೆ’ ವಿಚಾರ ಗೋಷ್ಠಿಯಲ್ಲಿ ಪ್ರಜಾಪ್ರಭುತ್ವ ಮತ್ತು ಅಸಹಮತ(ಭಿನ್ನಾಭಿಪ್ರಾಯ) ಕುರಿತು ವಿಚಾರ ಮಂಡನೆ ಮಾಡಿ ಮಾತನಾಡಿದ ಅವರು ದೇಶದ ಪ್ರಸ್ತುತ ಸನ್ನಿವೇಶದಲ್ಲಿ ಅಸಹಮತದ ಕುರಿತು ವಿಶ್ಲೇಷಿಸಿದರು.
ದೇಶವನ್ನು ಕೇವಲ ಸ್ವಾತಂತ್ರ್ಯನಂತರದ ಪ್ರಜಾಪ್ರಭುತ್ವವನ್ನಾಗಿ ನೋಡದೇ ಮೂರು ಸಾವಿರ ವರ್ಷಗಳ ಇತಿಹಾಸವನ್ನು ಪರಿಗಣಿಸಬೇಕು. ದೇಶದಲ್ಲಿ ಭಿನ್ನಾಭಿಪ್ರಾಯವನ್ನು ಯಾವತ್ತೂ ಗೌರವಿಸಲಾಗುತ್ತಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಪಂಚಾಯ್ತಿ ಕಟ್ಟೆಗಳಿಂದ ಹಿಡಿದು ಪಾರ್ಲಿಮೆಂಟ್'ವರೆಗೂ ಅಭಿಪ್ರಾಯ ಭೇದಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಆದರೆ ಇತ್ತೀಚೆಗೆ ಮಾತ್ರ ಪರಿಸ್ಥಿತಿ ಬದಲಾಗಿದ್ದು, ಅಸಹಮತವನ್ನೇ ರಾಷ್ಟ್ರವಿರೋಧಿ ಎಂದು ಪರಿಗಣಿಸಲಾಗುತ್ತಿದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರಿಗೆ ದೇಶ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದರು.
ದೇಶದ ಮೊಟ್ಟ ಮೊದಲ ಸರ್ಕಾರದಲ್ಲೂ ಅಸಹಮತ ಇದ್ದೇ ಇತ್ತು. ಆದರೆ ಇಲ್ಲಿ ಅಭಿಪ್ರಾಯ ಬೇಧಕ್ಕೆ ಅವಕಾಶವಿತ್ತು. ಸ್ವತಃ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳಿಗೆ ಬೆಲೆ ಕೊಟ್ಟಿದ್ದರು. ಆದರೆ ಈಗ ಪಾರ್ಲಿಮೆಂಟ್‌ನಲ್ಲಿ ಒಂದೇ ಧ್ವನಿ ಮಾತ್ರ ಕೇಳಿ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳದೇ ಆಡಳಿತ ವೈಖರಿ ಟೀಕಿಸಿದರು.
ಭಿನ್ನಾಭಿಪ್ರಾಯವನ್ನು ಮೂಲಭೂತ ಹಕ್ಕು ಎಂದೇ ದೇಶದಲ್ಲಿ ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ವಿಚಾರದಲ್ಲೂ ಅಸಮ್ಮತಿ ವ್ಯಕ್ತಮಾಡುವ ಅಧಿಕಾರವಿದೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ತಮ್ಮ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ತರೂರು ಮುಖ್ಯವಾಗಿ ಅಲ್ಪಸಂಖ್ಯಾತರು ಅಭಿಪ್ರಾಯಬೇಧವಿದ್ದರೂ ಮೌನವಾಗಿರುವುದೇ ಲೇಸು ಎಂಬ ನಿರ್ಧಾರಕ್ಕೆ ಬರುವಂತಾಗಿರುವುದು ವಿಪರ್ಯಾಸ ಎಂದರು.
ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಶಶಿ ತರೂರು ಗೋ ರಕ್ಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರವೇ ತನ್ನ ಧೋರಣೆ ಸ್ಪಷ್ಟಪಡಿಸಿದ್ದು ಕೇಂದ್ರದ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.
ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಚುನಾವಣಾ ಸುಧಾರಣೆ ವಿಚಾರವಾಗಿ ಪ್ರೊ.ರಾಜೀವಗೌಡ, ಸಾಹಿತ್ಯ ಮತ್ತು ಭಿನ್ನಾಭಿಪ್ರಾಯ ವಿಷಯದಲ್ಲಿ ಡೇನಿಯಲ್ ಸುಕುಮಾರ್, ಬದಲಾಗುತ್ತಿರುವ ವಿಶ್ವದಲ್ಲಿ ಭಾರತದ ಸ್ಥಾನಮಾನ ಕುರಿತಾಗಿ ತೇಜಸ್ವಿ ಸೂರ್ಯ,ವಿಕೇಂದ್ರೀಕರಣ ಮತ್ತು ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆ ವಿಷಯವಾಗಿ ಪ್ರಕಾಶ್ ಬೆಳವಾಡಿ ವಿಚಾರ ಮಂಡನೆ ಮಾಡಿದರು.
ಕನ್ನಡಪ್ರಭ ವಾರ್ತೆ
epaperkannadaprabha.com
