2031ರ ಮಾಸ್ಟರ್ ಪ್ಲಾನ್’ಗೆ ತೀವ್ರ ಆಕ್ಷೇಪ

First Published 17, Jan 2018, 10:38 AM IST
Oppose For 2031 Plan
Highlights

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿ ರುವ  2031ರ ಮಹಾ ಯೋಜನೆ ಕರಡು ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಬೆಂಗಳೂರು ಮಹಾನಗರ ಯೋಜನಾ ಸಮಿತಿಯ ಸಭೆಯಲ್ಲಿ ಕರಡು ಮಹಾ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಬೆಂಗಳೂರು (ಜ.17): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿ ರುವ  2031ರ ಮಹಾ ಯೋಜನೆ ಕರಡು ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಬೆಂಗಳೂರು ಮಹಾನಗರ ಯೋಜನಾ ಸಮಿತಿಯ ಸಭೆಯಲ್ಲಿ ಕರಡು ಮಹಾ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಈಗಾಗಲೇ ಸಿದ್ಧಪಡಿಸಿರುವ ಮಹಾಯೋಜನೆಯ ಕರಡಿನಲ್ಲಿ ಅನೇಕ ದೋಷಗಳಿದ್ದು, ಕೂಡಲೇ ವಾಪಸ್ ಪಡೆದುಕೊಂಡು ಮರು ಯೋಜನೆ ರೂಪಿಸಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂತು. ಆದರೆ ಬಿಡಿಎ ಸಾರ್ವಜನಿಕರಿಂದ ಆಹ್ವಾನಿಸಿರುವ ಆಕ್ಷೇಪಗಳನ್ನು ಆಧರಿಸಿ ಕೆಲ ಬದಲಾವಣೆ ಗಳೊಂದಿಗೆ ಬಿಡಿಎ ಯೋಜನಾ ಸಮಿತಿ ಅಂತಿಮ ಮಹಾ ಯೋಜನೆ ಪ್ರಕಟಿಸುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಮಹಾ ಯೋಜನೆ ಅಂತಿಮಗೊಳಿಸುವ ಮೊದಲು ಬೆಂಗಳೂರು ಮಹಾನಗರ ಯೋಜನೆ ಸಮಿತಿಯ ಸದಸ್ಯರ ಸಲಹೆ ಪಡೆಯಲು ಸಭೆ ನಡೆಸಲಾಯಿತು.

ಈಗಾಗಲೇ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಜನವರಿ 23ರಂದ ಕೊನೆಯ ದಿನವಾಗಿದೆ. ಈಗಾಗಲೇ 2,600 ಆಕ್ಷೇಪಗಳು ಬಿಡಿಎಗೆ ಸಲ್ಲಿಕೆಯಾಗಿವೆ. ಅವುಗಳನ್ನೆಲ್ಲ ಪರಿಶೀಲಿಸಿ, ಯೋಜನೆ ಅಂತಿಮ ಗೊಳಿಸಲಾಗುವುದು. ಈ ಮಧ್ಯೆ ಕೆಲವರು ದಿನಾಂಕ ವಿಸ್ತರಣೆಗೆ ಸಲಹೆ ಮಾಡಿದ್ದು, ಸದ್ಯಕ್ಕೆ ದಿನಾಂಕ ವಿಸ್ತರಣೆ ಅಗತ್ಯತೆ ಕಂಡುಬಂದಿಲ್ಲ. ನಿಗದಿತ ಸಮಯದಲ್ಲೇ ಆಕ್ಷೇಪಣೆ ಪರಿಶೀಲಿಸಿ, ಸೂಕ್ತ ಸಲಹೆ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರದ ಕೆರೆಗಳಿಗೆ ಬಫರ್ ಜೋನ್ ಗುರುತು ಮಾಡಿರುವ ಸಂಬಂಧ ಕೆಲವರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಬೆಂಗಳೂರು ನಗರದ ಕೆರೆಗಳಿಗೆ ಮಾತ್ರ 75 ಮೀಟರ್ ಬಫರ್ ಜೋನ್ ನಿಗದಿ ಮಾಡಿದೆ. ಈ ನಿಟ್ಟಿನಲ್ಲಿ ಕೆರೆಗಳ ವರ್ಗೀಕರಣ ಮಾಡಿ, ಅವುಗಳ ಬಫರ್ ಜೋನ್ ನಿರ್ಧರಿಸುವ ಅಧಿಕಾರ`4 ಸರ್ಕಾರಕ್ಕೆ ಇದೆ. ಹೀಗಾಗಿ ಎನ್‌ಜಿಟಿ ಆದೇಶವನ್ನು ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಮಹಾಯೋಜನೆ ರೂಪಿಸಲಾಗಿದೆ ಎಂದು ಸಮರ್ಥಿಸಿಕೊಂಡ ಅವರು, ಈ ಕುರಿತು ಅಡ್ವೋಕೇಟ್ ಜನರಲ್‌ರಿಂದ ಸಲಹೆ ಪಡೆಯುವಂತೆ ಕೆಲವರು ಹೇಳಿದ್ದಾರೆ. ಅದನ್ನೂ ಕೂಡ ಪರಿಶೀಲಿಸಲಾಗುವುದು ಎಂದು ಸಚಿವ ಜಾರ್ಜ್ ತಿಳಿಸಿದರು.

ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಮಾತನಾಡಿ, ಮಹಾನಗರ ಯೋಜನೆ ಸಮಿತಿ ಸಭೆಯನ್ನೇ ನಡೆಸದೇ ಕರಡು ಪ್ರಕಟಿಸಲಾಗಿತ್ತು. ಹೀಗಾಗಿ ಬಿಜೆಪಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಂದಿನ ಸಭೆ ನಡೆಸಲಾಗಿದೆ.

ಇಡೀ ಸಿಡಿಪಿ ಅತ್ಯಂತ ವೈಜ್ಞಾನಿಕವಾಗಿದ್ದು, ಕೂಡಲೇ ವಾಪಸ್ ಪಡೆಯುವಂತೆ ಸಲಹೆ ಮಾಡಿದ್ದೇವೆ. ಕೆಲವು ಜನವಸತಿ ಪ್ರದೇಶಗಳನ್ನು ರಸ್ತೆಗಳು, ಕೆರೆಗಳು ಎಂದು ಸಿಡಿಪಿಯಲ್ಲಿ ಗುರುತಿಸಲಾಗಿದೆ ಎಂದು ದೂರಿದರು. ಬೆಂಗಳೂರಿನ ಅನೇಕರಿಗೆ ಈ ಸಿಡಿಪಿಯಿಂದ ತೊಂದರೆ ಆಗಲಿದೆ. ಇನ್ನೂ ಕೆಲವೆಡೆ ಅರಣ್ಯ ಪ್ರದೇಶವನ್ನು ವಾಣಿಜ್ಯ ಪ್ರದೇಶವೆಂದು ಗುರುತಿಸಲಾಗಿದೆ. ಒಂದೆಡೆ 1907ರ ನಕಾಶೆ ಪಾಲಿಸಿದ್ದಾಗಿ ಹೇಳುವ ಬಿಡಿಎ, ಮತ್ತೊಂದೆಡೆ ಸೆಟ್‌ಲೈಟ್ ದೃಶ್ಯಗಳನ್ನು ಪರಿಗಣಿಸಿದ್ದಾಗಿ ಹೇಳುತ್ತಿದೆ. ಹಲವಾರು ಗೊಂದಲಗಳ ಗೂಡಾಗಿರುವ ಸಿಡಿಪಿಯನ್ನು ವಾಪಸ್ ಪಡೆದು, ಮತ್ತೊಮ್ಮೆ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.

ಜನವಸತಿ, ಜಲಮೂಲಗಳು, ಅರಣ್ಯ, ರಸ್ತೆಗಳು ಹೀಗೆ ಶೇಕಡಾವಾರು ಪ್ರಮಾಣವನ್ನು ಸರಿದೂಗಿಸುವ ಭರದಲ್ಲಿ ಎನ್‌ಜಿಟಿ ನೀಡಿದ ಆದೇಶವನ್ನೇ ಧಿಕ್ಕರಿಸಿ, ಕೆರೆ ಕೋಡಿಗಳನ್ನು ರಸ್ತೆಗಳೆಂದು ದಾಖಲಿಸಿದ ನಿದರ್ಶನಗಳಿವೆ. ಹೀಗಾಗಿ ಮಹಾಯೋಜನೆ ಜಾರಿಗೊಂಡರೆ ಭವಿಷ್ಯದಲ್ಲಿ ಭಾರಿ ತೊಂದರೆ ಆಗಲಿದೆ. ಇದನ್ನು ವಾಪಸ್ ಪಡೆಯದೇ ಬೇರೆ ಬಾರಿ ಇಲ್ಲ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಸಚಿವರಾದ ಆರ್.ರೋಶನ್ ಬೇಗ್, ಎಚ್.ಎಂ.ರೇವಣ್ಣ, ಮೇಯರ್ ಸಂಪತ್ ರಾಜ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ಬಿಡಿಎ ಆಯುಕ್ತ ರಾಕೇಶ್‌ಸಿಂಗ್, ನಗರಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ, ಬಿಡಿಎ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

loader