ಬೆಂಗಳೂರು : ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಆಮಿಷವೊಡ್ಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು,  ಪಕ್ಷದ 80 ಶಾಸಕರನ್ನು ಸಂಪರ್ಕಿಸಿ ಬಿಜೆಪಿಯವರು ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದ್ದರೆ, ಸಚಿವ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯ ಐದು ನಾಯಕರು ಆಪರೇಷನ್ ಕಮಲ ನಡೆಸುವ ಅಖಾಡಕ್ಕೆ ಧುಮುಕಿದ್ದಾರೆ ಎಂದು ದೂರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ದಿನೇಶ್ ಗುಂಡೂರಾವ್, ಬಿಜೆಪಿಯವರು ನೀತಿಗೆಟ್ಟ ಹಾದಿ ತುಳಿಯಲು ಮುಂದಾಗಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು ಹಾಗೂ ಉರುಳಿಸಲು ಯತ್ನಿ ಸಿದ್ದಾರೆ. ಈ ಮೊದಲೇ ಒಮ್ಮೆ ಸರ್ಕಾರ ರಚಿಸಲು ಹಾಗೂ ಆಪರೇಷನ್ ಮೂಲಕ ಸರ್ಕಾರ ರಚನೆ ತಪ್ಪಿಸಲು ಅನೈತಿಕ ದಾರಿಯಲ್ಲಿ ನಡೆದಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಪಕ್ಷದವರನ್ನು ಸಂಪರ್ಕಿಸಿ ಆಮಿಷ ವೊಡ್ಡು ವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಿ.ಎಸ್. ಯಡಿ ಯೂರಪ್ಪ ಅವರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸುದ್ದಾರೆ. 

ಆದರೆ, ಅವರ ಪ್ರಯತ್ನಕ್ಕೆ ನಮ್ಮ ಶಾಸಕರು ಬಲಿಯಾಗುವುದಿಲ್ಲ. ದೆಹಲಿಗೆ ತೆರಳಿರುವ ಶಾಸಕರು ಪಕ್ಷದ ಸಂಘಟನೆ, ಬಲವರ್ಧನೆ ಬಗ್ಗೆ ಚರ್ಚಿಸಲು ತೆರಳಿದ್ದಾರೆಯೇ ಹೊರತು ಬೇರೇನೂ ಅಲ್ಲ.  ಬಿಜೆಪಿಯವರು ಈ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನಗಳು ಫಲಿಸುವುದಿಲ್ಲ ಎಂದರು. ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಾಯಕರನ್ನು ಸೆಳೆಯಲು ಐವರು ಬಿಜೆಪಿ ನಾಯಕರು ಅಖಾಡಕ್ಕೆ ದುಮುಕಿದ್ದಾರೆ. 

ಅವರು ಪ್ರತಿನಿತ್ಯ ಇದೇ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರನ್ನು ಸಂಪರ್ಕಿಸಿ ಅಮಿಷವೊಡ್ಡುತ್ತಿದ್ದಾರೆ. ಪಕ್ಷದ ಯಾವೆಲ್ಲಾ ನಾಯಕರೊಂದಿಗೆ ಬಿಜೆಪಿಗರು ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ನಮಗಿದೆ. ಸರಿಯಾದ ಸಮಯದಲ್ಲಿ ಅದನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು. 

ವಿಜಯೇಂದ್ರ ಪ್ರಾಮಾಣಿಕ ಅಧಿಕಾರಿ: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಪುತ್ರ ಹಾಗೂ ಐಪಿಎಸ್ ಅಧಿಕಾರಿ ವಿಜಯೇಂದ್ರ ಅವರನ್ನು ಕರ್ನಾಟಕ ವಲಯದ ಸಿಬಿಐ ಮುಖ್ಯಸ್ಥರನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು. ವಿಜಯೇಂದ್ರ ಪ್ರಾಮಾಣಿಕ ಅಧಿಕಾರಿ. 

ಪಾಪ ಅವರು ಇನ್ನೂ ಹುಡುಗ. ಸ್ವಂತ ಊರಿಗೆ ಬರಲು ಸಹಜವಾಗಿ ಎಲ್ಲರಿಗೂ ಆಸೆ ಇರುತ್ತದೆ. ಶಂಕರ ಬಿದರಿಯವರು ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಕೆಲಸ ಮಾಡಿ ಸ್ವಂತ ಪಕ್ಷ ಕಟ್ಟಿದ್ದರು. ಈ ವಿಚಾರಗಳಿಗೆ ರಾಜಕೀಯ ಬಣ್ಣ ನೀಡುವುದು ಬೇಡ ಎಂದು ತಿಳಿಸಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ನನ್ನನ್ನು ಮುಖ್ಯಮಂತ್ರಿ ಮಾಡಿದ್ದರೆ ನಾನು ಆ ಬಗ್ಗೆ ಹೇಳುತ್ತಿದ್ದೆ ಎಂದು ಇದೇ ವೇಳೆ ಚಟಾಕಿ ಹಾರಿಸಿದರು.