ಬೆಂಗಳೂರು:  ಭಾರತ ಉಪಗ್ರಹ ಛೇದಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸುವ ವರೆಗೂ ಈ ಯೋಜನೆಯ ಬಗ್ಗೆ ಅತ್ಯಂತ ರಹಸ್ಯವನ್ನು ಕಾಪಾಡಿಕೊಳ್ಳಲಾಗಿತ್ತು. ಕೇವಲ 5ರಿಂದ 6 ಮಂದಿಯನ್ನು ಹೊರತುಪಡಿಸಿ ಉಳಿದ ಯಾರಿಗೂ ಕ್ಷಿಪಣಿ ಪ್ರಯೋಗದ ಬಗ್ಗೆ ಕಿಂಚಿತ್ತೂ ಮಾಹಿತಿ ಇರಲಿಲ್ಲ!

ಎ- ಸ್ಯಾಟ್‌ ಕ್ಷಿಪಣಿ ಪ್ರಯೋಗದ ಬಳಿಕ ಮಾಧ್ಯಮವೊಂದರ ಜೊತೆ ಮಾಹಿತಿ ಹಂಚಿಕೊಂಡಿರುವ ಡಿಆರ್‌ಡಿಒ ಮುಖ್ಯಸ್ಥ ಸತೀಶ್‌ ರೆಡ್ಡಿ, ಮಿಷನ್‌ ಶಕ್ತಿ- ಉಪಗ್ರಹ ಛೇದಕ ಕ್ಷಿಪಣಿಯ ವ್ಯಾಪ್ತಿ ಮತ್ತು ಉದ್ದೇಶದ ಬಗ್ಗೆ ರಹಸ್ಯವನ್ನು ಕಾಪಾಡಿಕೊಂಡು ಬರಲಾಗಿತ್ತು. ಬುಧವಾರ ಕ್ಷಿಪಣಿ ಪರೀಕ್ಷೆ ನಡೆಯುವ ಬಗ್ಗೆ ಮಂಗಳವಾರ ಸಂಜೆಯವರೆಗೂ ಪ್ರಧಾನಿ ಸೇರಿ 5ರಿಂದ 6 ಮಂದಿಯನ್ನು ಹೊರತುಪಡಿಸಿ ಉಳಿದ ಯಾರಿಗೂ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

1998ರಲ್ಲಿ ಭಾರತ ಫೋಖರನ್‌ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸಂದರ್ಭದಲ್ಲೂ ಇದೇ ರೀತಿಯ ರಹಸ್ಯವನ್ನು ಕಾಪಾಡಿಕೊಳ್ಳಲಾಗಿತ್ತು. ಫೋಖರನ್‌ ಅಣು ಪರೀಕ್ಷೆ ಭಾರತದ ಬ್ಯಾಲಿಸ್ಟಿಕ್‌ ಕ್ಷಿಪಣಿ ಯೋಜನೆಗೆ ನಾಂದಿ ಹಾಡಿತ್ತು. ಇದರ ಫಲವಾಗಿ ಭಾರತ ಬಾಹ್ಯಾಕಾಶದಲ್ಲಿ ಸೂಪರ್‌ ಪವರ್‌ ಎನಿಸಿಕೊಂಡಿದೆ.