ಕೊಡಗು ಸೇರಿದಂತೆ ಹಲವೆಡೆ ವಿದೇಶಿ ಮೂಲದ ಕರಿಮೆಣಸು ವಹಿವಾಟಿಗೆ ಸಂಬಂಧಿಸಿದಂತೆ ವಿವಿಧ ಬೆಳೆಗಾರ ಸಂಘಟನೆಗಳು ಒಗ್ಗೂಡಿ ಸಭೆ ನಡೆಸಿದ್ದು ಕರಿಮೆಣಸು ಆಮದಿಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸುವ ಆನ್’ಲೈನ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಮಡಿಕೇರಿ : ಕೊಡಗು ಸೇರಿದಂತೆ ಹಲವೆಡೆ ವಿದೇಶಿ ಮೂಲದ ಕರಿಮೆಣಸು ವಹಿವಾಟಿಗೆ ಸಂಬಂಧಿಸಿದಂತೆ ವಿವಿಧ ಬೆಳೆಗಾರ ಸಂಘಟನೆಗಳು ಒಗ್ಗೂಡಿ ಸಭೆ ನಡೆಸಿದ್ದು ಕರಿಮೆಣಸು ಆಮದಿಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸುವ ಆನ್’ಲೈನ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಕುಶಾಲನಗರದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್‌ನ ಸಹಯೋಗದಲ್ಲಿ ಸಭೆ ನಡೆಸಿದ ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್ ಸಂಘಟನೆಗಳ ಪದಾಧಿಕಾರಿಗಳು ಪ್ರಸ್ತುತ ಕರಿಮೆಣಸು ಆಮದಿನಿಂದಾಗಿ ಭಾರತೀಯ ಕಾಳುಮೆಣಸಿಗೆ ಬೆಲೆ ಮತ್ತು ಬೇಡಿಕೆ ಗಣನೀಯವಾಗಿ ಇಳಿಮುಖವಾಗಿರುವ ಬಗ್ಗೆ ಚರ್ಚೆ ನಡೆಸಿದರು.
ಈಗಾಗಲೇ ಈ ವಿಚಾರದಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಚಂಗಪ್ಪ ವಾಣಿಜ್ಯ ಸಚಿವರನ್ನು ಸಂಪರ್ಕಿಸಿದ್ದು, ಈ ವಿಚಾರದ ಬಗ್ಗೆ ತಿಳಿಸಿರುವ ಬಗ್ಗೆಯೂ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ರಫ್ತು ಮತ್ತು ಮರುರಫ್ತು ವಿಚಾರವಾಗಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್‌ನ ಸದಸ್ಯ ಪ್ರದೀಪ್ ಪೂವಯ್ಯಮಾಹಿತಿ ನೀಡಿ, ದಾಖಲೆಗಳ ಪ್ರಕಾರ ಆಗಸ್ಟ್ ತಿಂಗಳಲ್ಲಿ ಭಾರತದ ಒಂದು ಬಂದರಿನಿಂದ ಇಂಡೊನೇಶಿಯಾ, ಶ್ರೀಲಂಕಾ, ವಿಯೆಟ್ನಾಂನಿಂದ 240 ಟನ್ ಕರಿಮೆಣಸು ರಫ್ತಾಗಿದೆ ಎಂಬುದು ತಿಳಿದು ಬಂದಿದ್ದು, ಇದೇ ರೀತಿ ಭಾರತದ ಅದೆಷ್ಟೋ ಬಂದರಿಗೆ ಸಹಸ್ರಾರು ಟನ್ ಕಾಳುಮೆಣಸು ರಫ್ತಾಗಿರುವ ಪ್ರಮಾಣ ಊಹೆಗೂ ನಿಲುಕದ್ದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಬೆಳೆಗಾರರ ನಿಯೋಗದ ಮೂಲಕ ಶೀಘ್ರದಲ್ಲಿಯೇ ದೇಶದ ವಾಣಿಜ್ಯ ಸಚಿವರು, ರೆವಿನ್ಯೂ ಮತ್ತು ಇಂಟಲಿಜೆನ್ಸ್ ಇಲಾಖೆ, ಸಂಬಾರ ಮಂಡಳಿ, ಕಸ್ಟಮ್ಸ್ ಇಲಾಖೆಗಳ ಎಲ್ಲ ಪ್ರಮುಖರಿಗೆ ಸಂಪೂರ್ಣ ಮಾಹಿತಿಗಳನ್ನು ಸೂಕ್ತ ದಾಖಲೆಗಳೊಂದಿಗೆ ನೀಡುವ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.
ವಿಯೆಟ್ನಾಂನಿಂದ ಭಾರತಕ್ಕೆ ಬರುತ್ತಿರುವ ಕಾಳುಮೆಣಸಿನಿಂದಾಗಿ ಸ್ಥಳೀಯ ಬೆಳೆಗಾರರಿಗೆ ಆರ್ಥಿಕ ನಷ್ಟದೊಂದಿಗೆ ತಾವು ಶ್ರಮ ವಹಿಸಿ ಬೆಳೆದ ಕಾಳುಮೆಣಸಿಗೆ ಬೇಡಿಕೆಯೂ ದೊರಕದಂತಾಗಿದೆ. ಹೀಗಾಗಿ ಬೆಳೆಗಾರ ಸಂಘಟನೆಗಳೆಲ್ಲಾ ಒಗ್ಗೂಡಿ ಸಮಸ್ಯೆಗೆ ಪರಿಹಾರವನ್ನು ತ್ವರಿತವಾಗಿ ಕಂಡುಕೊಳ್ಳಬೇಕಾಗಿದೆ ಎಂದೂ ಸಂಘಟನೆಯ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.
