ಪೊಲೀಸ್ ಠಾಣೆಗಳು ಹಾಗೂ ಜೈಲುಗಳಿಗೆ ದೇಶಾದ್ಯಂತ ಒಂದೇ ವಿನ್ಯಾಸದ ಕಟ್ಟಡ ಇರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ನವದೆಹಲಿ: ಪೊಲೀಸ್ ಠಾಣೆಗಳು ಹಾಗೂ ಜೈಲುಗಳಿಗೆ ದೇಶಾದ್ಯಂತ ಒಂದೇ ವಿನ್ಯಾಸದ ಕಟ್ಟಡ ಇರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಪೊಲೀಸ್ ಠಾಣೆಗಳು ಹಾಗೂ ಜೈಲುಗಳು ಯಾವ ವಿನ್ಯಾಸದಲ್ಲಿ ಇರಬೇಕು ಎಂಬುದನ್ನು ಅಂತಿಮಗೊಳಿಸಲು ವಾಸ್ತುಶಿಲ್ಪಿಗಳಿಗಾಗಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸುವ ಪ್ರಸ್ತಾವ ಪರಿಶೀಲಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶಾದ್ಯಂತ ಪೊಲೀಸ್ ಠಾಣೆ ಹಾಗೂ ಜೈಲುಗಳು ಒಂದೇ ರೀತಿಯ ವಿನ್ಯಾಸ ಹೊಂದಿರುವ ಕಟ್ಟಡದಲ್ಲಿ ಇದ್ದರೆ ಜನರಿಗೆ ಗುರುತಿಸಲು ಅನುಕೂಲವಾಗುತ್ತದೆ. ಅಲ್ಲದೆ ಸಮುದಾಯ ಪೊಲೀಸ್ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಅನುಕೂಲವಾಗುತ್ತದೆ ಎಂಬ ವಾದ ಕೇಂದ್ರ ಸರ್ಕಾರದ್ದು.
ಇದೇ ವೇಳೆ, ನಗರ ಹಾಗೂ ಪಟ್ಟಣ ಪ್ರದೇಶಗಳ ಪ್ರಮುಖ ಭಾಗಗಳಲ್ಲಿ ವಿಶಾಲ ಪ್ರದೇಶದಲ್ಲಿರುವ ಜೈಲುಗಳನ್ನು ಹೊರವಲಯಕ್ಕೆ ಸ್ಥಳಾಂತರಿಸಬೇಕು. ನಗರದೊಳಗಿರುವ ಜಾಗವನ್ನು ಪರ್ಯಾಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ಗೃಹ ಸಚಿವಾಲಯ ಸಲಹೆ ಮಾಡಿದೆ.
