ಹಿರಿಯೂರು (ಫೆ. 22):  ನಗರದ ಪ್ರವಾಸಿ ಮಂದಿರದ ನೂತನ ಸಂಕೀರ್ಣದ ಆವರಣದಲ್ಲಿ ಶಾಸಕಿ ಪೂರ್ಣಿಮಾ ಅವರ ಕಾರು ಹರಿದು ಪಾದಚಾರಿಯೊಬ್ಬ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆ ಸೇರಿದ ಘಟನೆ  ನಡೆದಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ತಮ್ಮ ಕ್ಷೇತ್ರ ಹಿರಿಯೂರು ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ವೇಳೆ ಪಾದಚಾರಿ ಅಬ್ದುಲ್‌ರೆಹಮಾನ್‌ (ವಯಸ್ಸು ನಮೂದಾಗಿಲ್ಲ) ಎಂಬಾತನ ಮೇಲೆ ಶಾಸಕರ ಫಾರ್ಚೂನರ್‌ ಕಾರು ಹರಿದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಗಾಯಾಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ತಲೆ, ದೇಹದ ಮತ್ತಿತರ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಶಾಸಕರು ಕಾರು ಇಳಿದು ಪ್ರವಾಸಿ ಮಂದಿರದೊಳಗೆ ಹೋದರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಗಾಯಾಳುವನ್ನು ಆಟೋದಲ್ಲಿ ಸಾಗಿಸಿದ ಬೆಂಬಲಿಗರು:

ಶಾಸಕರ ಕಾರುಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ಬಿದ್ದಿದ್ದ ಅಬ್ಬುಲ್‌ರೆಹಮಾನ್‌ ಅವರನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳದಲ್ಲಿ ಶಾಸಕರ ವಾಹನ ಹೊರತು ಇತರೆ ವಾಹನಗಳು ಇರದೆ ಇದ್ದಿದ್ದರಿಂದ ಶಾಸಕರ ಬೆಂಬಲಿಗರು ಟಿ.ಬಿ. ಸರ್ಕಲ್‌ಗೆ ತೆರಳಿ ಆಟೋ ಕರೆತಂದು ಗಾಯಾಳವನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವೇಳೆಗಾಗಲೇ ಅರ್ಧಗಂಟೆಗೂ ಹೆಚ್ಚು ಸಮಯವಾಗಿದ್ದರಿಂದ ತೀವ್ರ ರಕ್ತಸ್ರಾವದಿಂದ ಗಾಯಾಳು ಪ್ರಜ್ಞೆ ಕಳೆದುಕೊಂಡಿದ್ದಾನೆ. ಈ ನಡುವೆಯ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲು ಮಾಡಿಕೊಂಡ ವೈದ್ಯರು ಗಾಯಾಳುವಿನ ಸ್ಥಿತಿ ಗಂಭೀರವಾಗಿರುವುದನ್ನು ಕಂಡು ತುರ್ತು ಚಿಕಿತ್ಸೆಗೆ ಚಿತ್ರದುರ್ಗಕ್ಕೆ ಕೊಂಡೊಯ್ಯಲು ಶಿಫಾರಸ್ಸು ಮಾಡಿದ್ದಾರೆ.

ಆದರೆ, ಪ್ರಮುಖ ಆ್ಯಂಬುಲೆನ್ಸ್‌ಗಳು ಲಭ್ಯವಿಲ್ಲದ ಕಾರಣಕ್ಕೋ ಏನೋ ಮಾರುತಿ ಓಮಿನಿ ಮಿನಿ ಆ್ಯಂಬುಲೆನ್ಸ್‌ನಲ್ಲಿ ಗಾಯಾಳುವನ್ನು ಚಿತ್ರದುರ್ಗಕ್ಕೆ ಕಳುಹಿಸಿಕೊಡಲಾಗಿದೆ. ದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮಂದುವರೆದಿದೆಯೆಂಬ ಮಾಹಿತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಗಂಟೆ ಬಳಿಕ ಸ್ಥಳಕ್ಕೆ ತೆರಳಿದ ಪೊಲೀಸರು:

ಘಟನೆ ನಡೆದು ಒಂದು ಗಂಟೆಗೂ ಹೆಚ್ಚುಕಾಲವಾಗಿದ್ದರೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ನಗರದೊಳಗಿರುವ ಪ್ರವಾಸಿ ಮಂದಿರದ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮಹಜರು ಮಾಡಲು ವಿಳಂಬವಾಗಿದೆ. ಈ ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಯಾರಿಂದಲೂ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ.

ದೂರು ದಾಖಲಾದದ್ದೂ ಸಂಜೆ:

ಘಟನೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಜರುಗಿದರೂ ದೂರು ದಾಖಲಾಗಲು ಸಂಜೆ 4 ಗಂಟೆಯಾಗಿರುವುದು ಏಕೆ ಎಂಬ ಸಾರ್ವಜನಿಕ ಪ್ರಶ್ನೆ ಎದ್ದುಕೂತಿದೆ. ಒಂದೆಡೆ ಶಾಸಕಿ ಪೂರ್ಣಿಮಾ ಅವರ ಕಾರೇ ಅಪಘಾತ ಮಾಡಿದರೂ ಗಾಯಾಳುವನ್ನು ಆಟೋದಲ್ಲಿ ಸಾಗಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದ್ದರೆ, ಸುದ್ದಿಯ ಮಾಹಿತಿ ಪಡೆಯಲು ಪೊಲೀಸರನ್ನು ಸಂಪರ್ಕಿಸಿದರೆ ಸಂಜೆಯವರೆಗೂ ಎಫ್‌ಐಆರ್‌ ದಾಖಲಾಗಿಲ್ಲವೆಂಬ ಸಿದ್ಧ ಉತ್ತರ ಕೇಳಿ ಬಂದಿದೆ.

ಅಂತಿಮವಾಗಿ 4 ಗಂಟೆಗೆ ಮೂರನೇ ವ್ಯಕ್ತಿಯಿಂದ ಘಟನೆ ಕುರಿತು ದೂರು ಸ್ವೀಕರಿಸಿದ ಪೊಲೀಸರು ಶಾಸಕರ ಕಾರಿನ ಚಾಲಕ ಮಲ್ಲಿಕಾರ್ಜುನ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಕಾರು ಯಾರ ಹೆಸರಲ್ಲಿದೆ?

ಅಪಘಾತ ನಡೆಸಿದ ಶಾಸಕಿ ಪೂರ್ಣಿಮಾ ಪ್ರಯಾಣಿಸುತ್ತಿದ್ದ ಕಾರಿನ ಸಂಖ್ಯೆ ಕೆ.ಎ.53 ಎಂಡಿ 8568 ಆಗಿದ್ದು, ಸೌಥ್‌ ಈಸ್ಟ್‌ ಏಷಿಯನ್‌ಎಜುಕೇಷನ್‌ ಎಂಬ ಬೆಂಗಳೂರಿನ ಕೆ.ಆರ್‌.ಪುರಂ ಮೂಲದ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ರಿಜಿಸ್ಟರ್‌ ಆಗಿರುವ ಮಾಹಿತಿ ಲಭ್ಯವಾಗಿದೆ. ಸದರಿ ಶಿಕ್ಷಣ ಸಂಸ್ಥೆ ಶಾಸಕಿ ಪೂರ್ಣಿಮಾ ಅವರ ತಂದೆ ಮಾಜಿ ಸಚಿವ ದಿ.ಎ.ಕೃಷ್ಣಪ್ಪನವರು ಸ್ಥಾಪಿಸಿದ್ದು, ಈಗ ಶಾಸಕಿಯ ಪತಿಯ ಉಸ್ತುವಾರಿಯಲ್ಲಿದೆ ಎನ್ನಲಾಗುತ್ತಿದೆ.