ದೇಶಕ್ಕೊಂದೆ ಕಾನೂನು ಉಡುಪಿ ಶ್ರೀಗಳ ಆಗ್ರಹ

First Published 14, Jan 2018, 8:10 AM IST
One Country One Law
Highlights

ಒಂದೇ ದೇಶ ಒಂದೇ ಕಾನೂನು, ಸಮಾನ ದುಃಖಿಗಳಿಗೆ ಸಮಾನ ಸೌಲಭ್ಯ ಎಂಬ ಹಕ್ಕೊತ್ತಾಯವನ್ನು ಕರ್ನಾಟಕದ ಎರಡು ಪ್ರಮುಖ ಮಠಾಧೀಶರು ಮಂಡಿಸಿದ್ದಾರೆ. ಒಂದೇ ದೇಶ ಎಂದ ಮೇಲೆ ಧರ್ಮದ ಆಧಾರದ ಮೇಲೆ ಪ್ರತ್ಯೇಕ ಕಾನೂನು ಯಾಕೆ? ಭಾರತೀಯರೆಲ್ಲರಿಗೂ ಒಂದೇ ಕಾನೂನು ಜಾರಿ ಮಾಡಿ. ಹಿಂದೂಗಳಿಗೆ ಆಗುತ್ತಿರುವ ತಾರತಮ್ಯ ನಿವಾರಿಸಿ... ಎಂದು ಭಾವಿ ಪರ್ಯಾಯ ಪೀಠಾಧೀಶ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

ಉಡುಪಿ (ಜ.14): ಒಂದೇ ದೇಶ ಒಂದೇ ಕಾನೂನು, ಸಮಾನ ದುಃಖಿಗಳಿಗೆ ಸಮಾನ ಸೌಲಭ್ಯ ಎಂಬ ಹಕ್ಕೊತ್ತಾಯವನ್ನು ಕರ್ನಾಟಕದ ಎರಡು ಪ್ರಮುಖ ಮಠಾಧೀಶರು ಮಂಡಿಸಿದ್ದಾರೆ. ಒಂದೇ ದೇಶ ಎಂದ ಮೇಲೆ ಧರ್ಮದ ಆಧಾರದ ಮೇಲೆ ಪ್ರತ್ಯೇಕ ಕಾನೂನು ಯಾಕೆ? ಭಾರತೀಯರೆಲ್ಲರಿಗೂ ಒಂದೇ ಕಾನೂನು ಜಾರಿ ಮಾಡಿ. ಹಿಂದೂಗಳಿಗೆ ಆಗುತ್ತಿರುವ ತಾರತಮ್ಯ ನಿವಾರಿಸಿ... ಎಂದು ಭಾವಿ ಪರ್ಯಾಯ ಪೀಠಾಧೀಶ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇದೇ ವೇಳೆ, ಮುಸ್ಲಿಮರಿಗೂ ಹಿಂದುಗಳಿಗೂ ಸಮಾನ ಸೌಲಭ್ಯ ಸಿಗಬೇಕು, ಅದಕ್ಕೆ ಸಂವಿಧಾನದ ಮೂಲಕ ಅವಕಾಶ ಕಲ್ಪಿಸಬೇಕು ಎಂದು ಹಾಲಿ ಪರ್ಯಾಯ ಪೀಠಾಧಿಪತಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ 2 ವರ್ಷಕ್ಕೊಮ್ಮೆ ನಡೆಯುವ ಪರ್ಯಾಯೋತ್ಸವ ಇನ್ನೇನು ಕೆಲವೇ ದಿನ ಇದೆ ಎನ್ನುವಾಗ ವಿಶ್ವೇಶ ತೀರ್ಥ ಸ್ವಾಮೀಜಿಯವರು 2 ವರ್ಷಗಳ ಕಾಲ ಕೃಷ್ಣನ ಪೂಜೆ ಮತ್ತು ಕೃಷ್ಣ ಮಠದ ಆಡಳಿತವನ್ನು ಸಾಂಗವಾಗಿ ನೆರವೇರಿಸಿದ್ದು, ಜ.18ರಂದು ಮುಂಜಾನೆ ಈ ಪೂಜೆ ಮತ್ತು ಆಡಳಿತದ ಅಧಿಕಾರವನ್ನು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಭಯ ಶ್ರೀಗಳು ‘ಕನ್ನಡಪ್ರಭ’ಕ್ಕೆ ಸಂದರ್ಶನ ನೀಡಿದ್ದು, ಅದರ ಆಯ್ದ ಭಾಗ ಇಲ್ಲಿದೆ.

ಒಂದೇ ದೇಶ, ಒಂದೇ ಕಾನೂನು: ಸರ್ಕಾರ ಅಂದ್ರೆ ಅಪ್ಪ ಇದ್ದಂತೆ, ಅವನಿಗೆ ಮೂರು ಮಂದಿ ಮಕ್ಕಳಿದ್ದರೆ, ಮೂವರನ್ನೂ ಸರಿಯಾಗಿ, ಸಮಾನವಾಗಿ ನೋಡಿಕೊಳ್ಳಬೇಕು, ಆಗ ಮಾತ್ರ ಅವ ಅಪ್ಪನಾಗುತ್ತಾನೆ, ಇಲ್ಲಾಂದ್ರೆ ಅಪಾಯನಾಗುತ್ತಾನೆ. ನಮ್ಮ ದೇಶದಲ್ಲಿ ಈಗ ಆಗಿರುವುದು ಅದೇ. ಸರ್ಕಾರ ಅಪ್ಪ ಆಗಿಲ್ಲ, ಅಪಾಯ ಆಗಿಬಿಟ್ಟಿದೆ. ಸರ್ಕಾರವೇ ಹಿಂದುಗಳಿಗೆ ಅಪಾಯಕಾರಿಯಾಗಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮತಾಂತರ ಮಾಡಿದರೆ ಯಾರೂ ವಿರೋಧಿಸಬಾರದು ಅನ್ನುತ್ತಾರೆ, ಅದೇ ನ್ಯಾಯದ ಪ್ರಕಾರ ಮತಾಂತರಕ್ಕೆ ಒಳಗಾದವರನ್ನು ಪುನಃ ಮೂಲಧರ್ಮಕ್ಕೆ ಮತಾಂತರ ಮಾಡಿದರೆ ಮಾತ್ರ ಅವರೇ ಅದನ್ನೂ ವಿರೋಧಿಸುತ್ತಾರೆ. ಇದು ಯಾವ ನ್ಯಾಯ? ಮತಾಂತರಕ್ಕೆ ಇಲ್ಲದ ವಿರೋಧ, ಅದರ ಇನ್ನೊಂದು ಮುಖ ಘರ್‌ವಾಪಸಿಗೆ ಯಾಕೆ? ಒಂದೋ ಮತಾಂತರವನ್ನು ತಡೆಯಲು ಅವಕಾಶ ಕೊಡಿ, ಘರ್‌ವಾಪಸಿ ಮಾಡುವುದಕ್ಕೂ ಅವಕಾಶ ಕೊಡಿ, ಇಲ್ಲಾಂದ್ರೆ ಎರಡಕ್ಕೂ ಅವಕಾಶ ನೀಡಬೇಡಿ, ಮತಾಂತರವೇ ಇಲ್ಲದಿದ್ದರೆ, ಘರ್‌ವಾಪಸಿಯ ಅಗತ್ಯವೂ ಇಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಹಿಂದುಗಳಿಗಿಲ್ಲ, ಮುಸ್ಲಿಮರಿಗೆ ಬೇಡ: ಯಾರೂ ನಮ್ಮ ಹುಡುಗಿ ಯರನ್ನು ಹೈಜಾಕ್ ಮಾಡಿ ತಮ್ಮಲ್ಲಿ ಇಟ್ಟುಕೊಂಡಿದ್ದಾರೋ, ಅವರಿಗೆ ಇದು ತಪ್ಪು ಅಂತ ಹೇಳುವ ಕಾನೂನು ಬರಬೇಕು, ನಾವು ಈಗಾಗಲೇ ಈ ‘ಲವ್ ಜಿಹಾದ್’ನಿಂದ ಸಾಕಷ್ಟು ಹುಡುಗಿಯರನ್ನು ಕಳೆದುಕೊಂಡಿದ್ದೇವೆ. ನಮ್ಮ ಜನಸಂಖ್ಯೆ ಕೂಡ ಕಡಿಮೆ ಆಗುತ್ತಿದೆ. ಮುಸ್ಲಿಮರು ಎಷ್ಟು ಬೇಕಾದರೂ ಮದುವೆಯಾಗಬಹುದು, ಎಷ್ಟು ಮಕ್ಕಳನ್ನು ಬೇಕಾದರೂ ಪಡೆಯಬಹುದು, ಆದರೆ ಹಿಂದೂಗಳಿಗೆ ಒಂದೇ ಮದುವೆ ಅಂತ ಕಾನೂನು ಮಾಡಿದ್ದಾರೆ. ಒಂದೇ ದೇಶ ಎಂದ ಮೇಲೆ ಈ ಬೇರೆ ಬೇರೆ ಕಾನೂನು ಯಾಕೆ ? ಸಮಾನತೆ ಎಲ್ಲಿದೆ? ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.

ಅವರಿಗಿರುವ ಸೌಲಭ್ಯ ನಮಗೂ ನೀಡಿ: ಅಲ್ಪಸಂಖ್ಯಾತರಿಗೆ ಸರ್ಕಾರವೇ ಅನೇಕ ವಿಧದ ಸವಲತ್ತುಗಳನ್ನು ನೀಡುತ್ತಿದೆ. ಇದಕ್ಕೆ ಆಕ್ಷೇಪ ಇಲ್ಲ. ಆದರೆ ಇನ್ನೊಂದು ಕಡೆ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ, ಅವರಿಗೆ ಈ ಎಲ್ಲಾ ಸೌಲಭ್ಯಗಳು ಸಿಗುತ್ತಿಲ್ಲ, ಇಲ್ಲಿ ಸಮಾನತೆ ಎನ್ನುವುದೇ ಇಲ್ಲ. ಎಲ್ಲರಿಗೂ ಅವರವರ ಧರ್ಮವನ್ನು ಅವರ ಪ್ರಾರ್ಥನಾಲಯಗಳಲ್ಲಿ ಆಚರಣೆಗೆ ಸ್ವಾತಂತ್ರ್ಯ ಇದೆ, ಆದರೆ ಅಲ್ಪಸಂಖ್ಯಾತರಿಗೆ ಹೋಲಿಸಿದರೆ ಹಿಂದೂಗಳಿಗೆ ಮಾತ್ರ ತಮ್ಮ ಧರ್ಮವನ್ನು ಗಟ್ಟಿಯಾಗಿ ಆಚರಿಸುವುದಕ್ಕೂ ಸ್ವಾತಂತ್ರ್ಯ ಇಲ್ಲದ ಸ್ಥಿತಿ ಇದೆ. ಭಾರತೀಯರೆಲ್ಲರಿಗೂ ಒಂದೇ ಒಂದೇ ಕಾನೂನು ಆಗಬೇಕು, ಇದನ್ನು ಮಾಡುವುದು ಸರ್ಕಾರದ ಕರ್ತವ್ಯ, ಅದಾದಾಗ ಮಾತ್ರ ಹಿಂದೂಗಳಿಗೆ ಆಗುವ ಅನ್ಯಾಯ ನಿಲ್ಲುತ್ತದೆ ಎನ್ನುತ್ತಾರೆ ವಿದ್ಯಾಧೀಶರು.

ದಾರಿಯಿಲ್ಲದೆ ಕೈಗೆ ಶಸ್ತ್ರ: ಸರ್ಕಾರ ಗೋಕಳ್ಳರಿಗೆ, ಗೋಹಂತಕರಿಗೆ, ಗೋಭಕ್ಷಕರಿಗೆ ರಕ್ಷಣೆ ನೀಡುತ್ತಿದೆ. ಗೋವುಗಳಿಗೆ ಕುಡಿಯುವ ನೀರು, ತಿನ್ನುವುದಕ್ಕೆ ಹುಲ್ಲು ಒದಗಿಸಿಗರೆ ಸಾಕು, ಗೋರಕ್ಷಣೆಗೆ ಬೇರೇನೂ ಬೇಡ. ಇದನ್ನು ಸರ್ಕಾರವೇ ಮಾಡಬೇಕು. ಮಾಡದಿದ್ದರೇ ಬೇರೆ ದಾರಿಯೇ ಇಲ್ಲದೇ ಶಸ್ತ್ರವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದರು.

ಸಮಾನ ಸೌಲಭ್ಯ ಸಿಗಬೇಕು: ಮುಸ್ಲಿಮರಿಗೂ, ದಲಿತರು ಸೇರಿ ಎಲ್ಲ ಹಿಂದುಗಳಿಗೂ ಸಮಾನವಾಗಿ ಸೌಲಭ್ಯಗಳು ಸಿಗಬೇಕು, ಅದಕ್ಕೆ ಸಂವಿಧಾನದ ಮೂಲಕ ಅವಕಾಶ ಮಾಡಿಕೊಡಬೇಕು ಎಂದು ನಾವು ಹೇಳಿದ್ದರಲ್ಲಿ ಏನು ತಪ್ಪಿದೆ? ಯಾಕೆ ಇದಕ್ಕೆ ವಿರೋಧ? ಇದರಲ್ಲಿ ಅಂಬೇಡ್ಕರ್ ಅವರಿಗೆ ಅವಮಾನವಾಗುವಂತಹದ್ದು ಏನಿದೆ? ಪ್ರಗತಿಪರರು ತಮ್ಮ ಸ್ವಂತ ಪ್ರಚಾರಕ್ಕೆ ಈ ವಿವಾದವನ್ನು ಹುಟ್ಟು ಹಾಕಿದ್ದಾರೆ... ಇದು ಪೇಜಾವರ ಶ್ರೀಗಳ ನೇರ ಆರೋಪ ಮತ್ತು ಆಕ್ಷೇಪ. ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿರುವ ಸೌಲಭ್ಯಗಳೆಲ್ಲವೂ ಮುಂದುವರಿಯಬೇಕು, ಜೊತೆಗೆ ಆ ಸೌಲಭ್ಯಗಳು ಬಹುಸಂಖ್ಯಾತರಿಗೂ, ದಲಿತರಿಗೂ ನೀಡಬೇಕು ಎನ್ನುವುದನ್ನು ಪೇಜಾವರ ಶ್ರೀಗಳು ಒತ್ತಿ ಹೇಳುತ್ತಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಮಾನವಾಗಿ ಸರ್ಕಾರಿ ಸವಲತ್ತುಗಳು ಸಿಗುವಂಥ ಒಂದು ತಿದ್ದುಪಡಿಯನ್ನು ಸಂವಿಧಾನದಲ್ಲಿ ಮಾಡಿ ಎಂದು ಹೇಳಿದರೆ ಯಾರಿಗೆ ಯಾವ ಅನ್ಯಾಯ ಆಗುತ್ತದೆ? ಬಹುಸಂಖ್ಯಾತರಿಗೆ ಸೌಲಭ್ಯಗಳನ್ನು ನೀಡುವಾಗ ಅಲ್ಪಸಂಖ್ಯಾತರಿಗೆ ನಿಲ್ಲಿಸಿ ಎಂದು ನಾವು ಎಲ್ಲೂ ಹೇಳಿಲ್ಲ. ಉದಾಹರಣೆಗೆ ಈಗ ಮುಸ್ಲಿಮರಿಗೆ ಮಾತ್ರ ಶಾದಿಭಾಗ್ಯ ಸಿಗುತ್ತಿದೆ. ಅದನ್ನು ಮುಂದುವರಿಸಲಿ, ಜೊತೆಗೆ ಅದನ್ನು ಹಿಂದೂಗಳಿಗೂ ವಿಸ್ತರಿಸಲಿ ಎಂದರು.

loader