ಹಾವೇರಿಯ ಹಳ್ಳಿಯಲ್ಲಿ ಕುಡಿವ ನೀರಿಗೆ ತತ್ವಾರ- ಟ್ಯಾಂಕರ್‌ನಲ್ಲಿ ತಂದು ಮಾರುತ್ತಿರುವ ಜನರು- ಕಾರಡಗಿಯಲ್ಲಿ ನಿತ್ಯ 45 ಟ್ಯಾಂಕರ್ ನೀರು ಮಾರಾಟ
- ನಾರಾಯಣ ಹೆಗಡೆ, ಹಾವೇರಿ
ನೀರ್ ಬೇಕೇನ್ರಿ ನೀರು... ಕೊಡಕ್ಕೆ 3 ರುಪಾಯಿ. ನೀರು ಬೇಕೇನ್ರೀ... ದೌಡ ಬಂದ್ರೆ ಸಿಗತೈತಿ, ಇಲ್ಲಾಂದ್ರ ಅದೂ ಇಲ್ಲ..
ಇದು ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ನಿತ್ಯವೂ ಕೇಳುವ ಧ್ವನಿ. ಗ್ರಾಮ ಪಂಚಾಯಿತಿಯಿಂದ ಹಳ್ಳಿಯ ಒಂದು ಮನೆಗೆ ದಿನಕ್ಕೆ ನೀಡುವ 8 ಕೊಡ ನೀರು ಸಾಕಾಗದ ಕಾರಣ ನೀರಿನ ಅನಿವಾರ್ಯತೆ ಅರಿತ ಕೆಲವರು ಟ್ರ್ಯಾಕ್ಟರ್ನಲ್ಲಿ ನೀರಿನ ಟ್ಯಾಂಕರ್ ಇಟ್ಟುಕೊಂಡು ನೀರನ್ನು ಹೀಗೆ ಮಾರಾಟ ಮಾಡುತ್ತಾರೆ. ಶುದ್ಧ ನೀರು ಸಿಗದೆ ಗ್ರಾಮಸ್ಥರು ವಿಯಿಲ್ಲದೆ ಹಣ ಕೊಟ್ಟು ಜೀವಜಲ ಖರೀದಿಸುತ್ತಾರೆ.
ಕೊಡ ನೀರಿಗೆ 3:
ಕಾರಡಗಿ ಗ್ರಾಮದಲ್ಲಿ 800ಕ್ಕೂ ಹೆಚ್ಚು ಕುಟುಂಬಗಳಿವೆ. ಗ್ರಾಮದಲ್ಲಿದ್ದ ಬೋರ್ವೆಲ್ಗಳು ನವೆಂಬರ್ ಅಂತ್ಯದಲ್ಲೇ ಬತ್ತಿವೆ. ಕೆಲವು ಕೊಳವೆ ಬಾವಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಿಗುತ್ತಿದೆ. ಆದರೆ, ಅಲ್ಲಿ ನೀರು ಪಡೆಯಬೇಕೆಂದರೆ ಒಂದು ದಿನ ಮುಂಚಿತವಾಗಿಯೇ ಕೊಡವನ್ನು ಸಾಲಿನಲ್ಲಿ ಇಟ್ಟು ಹೋಗಬೇಕು.
ಗ್ರಾಮದಲ್ಲಿ ಭೀಕರ ಸ್ವರೂಪ ಪಡೆದಿರುವ ನೀರಿನ ಸಮಸ್ಯೆ ನೀಗಿಸಲೆಂದು ನಾಲ್ಕು ಕೊಳವೆಬಾವಿ ಕೊರೆಸಲಾಗಿದೆ. ಆದರೆ, ಈಗ ಅದರಲ್ಲಿ ಹನಿ ನೀರೂ ಇಲ್ಲ. ಇದರಿಂದ ಡಿಸೆಂಬರ್ ಆರಂಭದಿಂದಲೇ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 10 ಕಿ.ಮೀ. ದೂರದಲ್ಲಿರುವ ಸವಣೂರಿನಿಂದ ನಿತ್ಯವೂ ಕಾರಡಗಿ ಗ್ರಾಮಕ್ಕೆ 40ರಿಂದ 45 ಟ್ಯಾಂಕರ್ ನೀರು ತಂದು ಪೂರೈಸಲಾಗುತ್ತಿದೆ. ಒಂದು ಕುಟುಂಬಕ್ಕೆ ಕೇವಲ 8 ಕೊಡ ನೀರಷ್ಟೇ ಸಿಗುತ್ತಿದೆ. ದೊಡ್ಡ ಕುಟುಂಬವಿದ್ದರೆ ಇದು ಯಾತಕ್ಕೂ ಸಾಲುವುದಿಲ್ಲ. ಸಮಸ್ಯೆ ತೀವ್ರಗೊಂಡಿರುವುದರಿಂದ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಟ್ಯಾಂಕರ್ನಲ್ಲಿ ನೀರು ಮಾರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ ಕೊಡ ನೀರಿಗೆ 2 ಇದ್ದದ್ದು ಬೇಡಿಕೆ ಹೆಚ್ಚಿದ್ದರಿಂದ ಈಗ 3ಕ್ಕೆ ಏರಿದೆ. ಹೀಗೆ ಸುಮಾರು ಸಾವಿರಾರು ಕೊಡ ನೀರು ಕಾರಡಗಿ ಗ್ರಾಮದಲ್ಲಿ ಮಾರಾಟವಾಗುತ್ತಿದೆ.
ಜನರ ಪಾಡು ಹೀಗಿದ್ದರೆ ಜಾನುವಾರುಗಳ ಸ್ಥಿತಿ ಇನ್ನಷ್ಟು ಶೋಚನೀಯ. ಗ್ರಾಮದ ಕಲುಷಿತ ಕೆರೆಯ ನೀರೇ ಅವುಗಳಿಗೆ ಆಸರೆಯಾಗಿದೆ. ವಿಧಿಯಿಲ್ಲದೆ ಕೆಲವರು ಬೋರ್ವೆಲ್ಗಳಲ್ಲಿ ಬರುವ ಗಡಸು ನೀರನ್ನೇ ಕುಡಿಸುತ್ತಿದ್ದಾರೆ.
ಶುಭಸಮಾರಂಭಗಳುಮುಂದೂಡಿಕೆ
ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸೇರಿ ಇತರೆ ಕಾರ್ಯಕ್ರಮಗಳನ್ನು ಮುಂದೂಡಲು ಗ್ರಾಮಸ್ಥರು ಮುಂದಾಗುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಯಾವುದೇ ಧಾರ್ಮಿಕ ಅಥವಾ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿಲ್ಲ. ಒಂದು ವೇಳೆ ಶುಭ ಕಾರ್ಯ ನಡೆಸುವುದಿದ್ದರೂ ಬೇರೆ ಊರಿನ ಕಲ್ಯಾಣ ಮಂಟಪಗಳಲ್ಲೇ ಹಮ್ಮಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 800 ನೀಡಬೇಕಿದೆ. ಈಗಲೇ ನೀರಿಗೆ ಇಷ್ಟು ಸಮಸ್ಯೆ ಇದ್ದರೆ ಮುಂದಿನ ನಾಲ್ಕು ತಿಂಗಳು ಬೇಸಿಗೆಯನ್ನು ಹೇಗೆ ಕಳೆಯುವುದು ಎಂಬುದೇ ಗ್ರಾಮಸ್ಥರಿಗೆ ಚಿಂತೆಯಾಗಿದೆ.
ವರ್ಷದಲ್ಲಿ 6 ತಿಂಗಳಿಗೂ ಹೆಚ್ಚಿನ ಕಾಲ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದೇವೆ. ಊರಲ್ಲಿರುವ ಕೊಳವೆಬಾವಿಗಳು ಬತ್ತಿವೆ. ಟ್ಯಾಂಕರ್ ಮೂಲಕ ನೀಡುವ 8 ಕೊಡ ನೀರು ಸಾಲುತ್ತಿಲ್ಲ. ಇನ್ನಷ್ಟು ನೀರು ಕೊಡುವ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು.
- ವಿಶ್ವನಾಥ ಪೂಜಾರ, ಕಾರಡಗಿ ಗ್ರಾಮಸ್ಥ
