ಭೋಪಾಲ್[ಆ.18]: ಮಧ್ಯಪ್ರದೇಶದ ದೇಪಾಲ್ಪುರ್ ನಲ್ಲಿ ನಡೆದ ಘಟನೆಯೊಂದನ್ನು ಕೆಲಿದರೆ ನಿಮ್ಮ ಮುಖದಲ್ಲೂ ಮಂದಹಾಸ ಮೂಡುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ಪೀರ್ ಪೀಪಲಿಯಾ ಹಳ್ಳಿಯ BSF ಯೋಧ ಮೋಹನ್ ಸಿಂಗ್ ಸುನೇರೆ ತ್ರಿಪುರಾದಲ್ಲಿ ಉಗ್ರರ ಮೇಲಿನ ದಾಳಿಯಲ್ಲಿ ಹುತಾತ್ಮರಾಗಿದ್ದರು. ಹೀಗಿರುವಾಗ ಕಳೆದ 27 ವರ್ಷಗಳಿಂದ ಅವರ ಕುಟುಂಬ ಗುಡಿಸಲಿನಲ್ಲಿ ದಿನ ದೂಡುತ್ತಿತ್ತು. ಸರ್ಕಾರದ ಬಳಿ ತಮ್ಮ ಕಷ್ಟ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಯೋಧನ ಕುಟುಂಬಕ್ಕೆ ಬಂದ ಪರಿಸ್ಥಿತಿ ಕಂಡ ಗ್ರಾಮಸ್ಥರೇ ಕೊನೆಗೆ ಚಂದಾ ಕೂಡಿಸಿ, 11 ಲಕ್ಷ ರೂಪಾತಯಿ ಮೊತ್ತ ಒಗ್ಗೂಡಿಸಿದ್ದಾರೆ. ಹಾಗೂ ಹುತಾತ್ಮನ ವಿಧವೆ ಪತ್ನಿಗೆ ರಕ್ಷಾಬಂಧನದಂದು ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಯೋಧನ ಕುಟುಂಬಕ್ಕೆ ಗ್ರಾಮಸ್ಥರು ಈ ಕೊಡುಗೆ ನೀಡಿದ ಪರಿಯೂ ಅದ್ಭುತ. ಈ ತಂಗಿ ಅಣ್ಣಂದಿರ ಕೈಗಳ ಮೇಲೆ ಹಾದು ಗೃಹಪ್ರವೇಶ ಮಾಡಿದ್ದಾಳೆ. ಗಡಿ ಭದ್ರತಾ ಪಡೆಯಲ್ಲಿದ್ದ ಯೋಧ ಮೋಹನ್ ಲಾಲ್ ಸುನೇರೇ ಕುಟುಂಬ ದಿನಗೂಲಿ ಮಾಡಿ ಜೀವನ ನಿರ್ವಹಿಸುತ್ತಿತ್ತು. ಯಾಕೆಂದರೆ 700 ರೂಪಾಯಿ ಪಿಂಚಣಿಯಿಂದ ಮೂವರ ಜೀವನ ನಿರ್ವಹಣೆ ಅಸಾಧ್ಯ.

ಯೋಧನ ಕುಟುಂಬದ ಈ ಕಷ್ಟ ಗಮನಿಸಿದ ಗ್ರಾಮಸ್ಥರು ಅಭಿಯಾನವೊಂದನ್ನು ಆರಂಭಿಸಿದರು. ನೋಡ ನೋಡುತ್ತಿದ್ದಂತೆಯೇ 11 ಲಕ್ಷ ರೂಪಾಯಿ ಒಂದುಗೂಡಿದೆ ಹಾಗೂ ಮನೆ ನಿರ್ಮಾಣಗೊಂಡಿದೆ. ಕಳೆದ ವರ್ಷ ಯೋಧನ ಪತ್ನಿಯಿಂದ ರಕ್ಷಾಬಂಧನ ಕಟ್ಟಿಸಿಕೊಂಡತೆ ಈ ಬಾರಿಯೂ ರಾಖಿ ಕಟ್ಟಿಸಿಕೊಂಡಿದ್ದಾರೆ ಹಾಗು ಈ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಗ್ರಾಮಸ್ಥರು ಹಳ್ಳಿಯ ಮುಖ್ಯರಸ್ತೆ ಬಳಿ ಯೋಧನ ಪ್ರತಿಮೆ ನಿರ್ಮಿಸಲೂ ಯೋಜನೆ ರೂಪಿಸಿದ್ದಾರೆ. ಅಲ್ಲದೇ ಯೋಧ ಕಲಿತ ಶಾಲೆಯ ಹೆಸರನ್ನೂ ಬದಲಾಯಿಸುವ ಪ್ರಯತ್ನ ಮುಂದುವರೆದಿದೆ.