ಕಳೆದ ವಾರ ರಾಷ್ಟ್ರಪತಿ ಹುದ್ದೆಗೆ ಶುಭ ವಿದಾಯ ಹೇಳಿದ ಪ್ರಣಬ್ ಮುಖರ್ಜಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು, ನೀವು ನನಗೆ ತಂದೆ ಸಮಾನರಾಗಿದ್ದೀರಿ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ನವದೆಹಲಿ (ಆ.03): ಕಳೆದ ವಾರ ರಾಷ್ಟ್ರಪತಿ ಹುದ್ದೆಗೆ ಶುಭ ವಿದಾಯ ಹೇಳಿದ ಪ್ರಣಬ್ ಮುಖರ್ಜಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು, ನೀವು ನನಗೆ ತಂದೆ ಸಮಾನರಾಗಿದ್ದೀರಿ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಪ್ರಣಬ್ ದಾ, ನಾವು ಬೇರೆ ಬೇರೆ ರಾಜಕೀಯ ಪಕ್ಷಗಳಿಂದ ರಾಜಕೀಯ ಪ್ರಯಾಣವನ್ನು ಮಾಡಿದವರು. ನಮ್ಮ ಸಿದ್ಧಾಂತಗಳು, ಅನುಭವಗಳು ಬೇರೆ ಬೇರೆಯಾದರೂ ಕೂಡಾ ನಿಮ್ಮ ಬುದ್ಧಿವಂತಿಕೆ, ಅಪಾರ ಜ್ಞಾನದಿಂದಾಗಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವಂತಾಯಿತು. ನೀವು ನನಗೆ ತಂದೆಯ ಸಮಾನರು ಎಂದು ಪ್ರಧಾನಿ ಮೋದಿ ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ.

3 ವರ್ಷಗಳ ಹಿಂದೆ ನಾನು ದೆಹಲಿಗೆ ಹೊರಗಿನವನಾಗಿ ಬಂದಾಗ ನನ್ನ ಮುಂದೆ ದೊಡ್ಡ ಸವಾಲುಗಳಿತ್ತು. ಅಂತಹ ಸಮಯದಲ್ಲಿ ತಂದೆಯಂತೆ, ಗುರುವಿನಂತೆ ಮಾರ್ಗದರ್ಶನ ನೀಡಿದ್ದೀರಿ. ನಿಮ್ಮ ಬುದ್ಧಿವಂತಿಕೆ, ಸಲಹೆ, ವೈಯಕ್ತಿಕ ಬೆಂಬಲ ನನ್ನನ್ನು ಅಪಾರ ಆತ್ಮವಿಶ್ವಾಸ, ಶಕ್ತಿಯನ್ನು ತುಂಬಿತು. ವಿಧೇಯ ಸಾರ್ವಜನಿಕ ಸೇವಕನಂತೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದೀರಿ. ನಿಮ್ಮ ಬಗ್ಗೆ ಇಡೀ ಭಾರತವೇ ಹೆಮ್ಮೆಪಡುತ್ತದೆ. ನಿಮ್ಮ ಸಲಹೆ-ಸಹಕಾರ, ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೋದಿ ಬರೆದ ಪತ್ರವನ್ನು ಪ್ರಣಬ್ ,ಮುಖರ್ಜಿ ಟ್ವಿಟರ್,ನಲ್ಲಿ ಶೇರ್ ಮಾಡಿಕೊಂಡಿದ್ದು, ಮೋದಿ ಮಾತುಗಳಿಂದ ಹೃದಯ ತುಂಬಿ ಬಂತು ಎಂದು ಪ್ರತಿಕ್ರಿಯಿಸಿದ್ದಾರೆ.