ನವದೆಹಲಿ[ಜೂ.17]: 17ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗುತ್ತಿದ್ದರೂ, ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಯಾರು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಪ್ರತಿಪಕ್ಷಗಳ ಜಂಘಾಬಲವೇ ಉಡುಗಿದಂತೆ ಕಂಡುಬರುತ್ತಿದೆ. ಸಾಮಾನ್ಯವಾಗಿ ಅಧಿವೇಶನಕ್ಕೂ ಮುನ್ನ ಪ್ರತಿಪಕ್ಷಗಳೆಲ್ಲಾ ಸಭೆ ಸೇರಿ, ಸರ್ಕಾರವನ್ನು ಯಾವ ರೀತಿ ತರಾಟೆಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸುತ್ತವೆ. ಸಮನ್ವಯತೆ ಸಾಧಿಸುತ್ತವೆ. ಈ ಬಾರಿ ಅಂತಹ ಯಾವುದೇ ಸಭೆಯೂ ನಡೆದಿಲ್ಲ. ಹಲವು ಪಕ್ಷಗಳು ಲೋಕಸಭೆಯಲ್ಲಿನ ತಮ್ಮ ನಾಯಕನನ್ನೂ ಆಯ್ಕೆ ಮಾಡಿಕೊಂಡಿಲ್ಲ.

ಚುನಾವಣೆ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ತ್ಯಜಿಸಲು ರಾಹುಲ್‌ ಗಾಂಧಿ ನಿರ್ಧರಿಸಿದ್ದಾರೆ. ಅವರನ್ನು ಮುಂದುವರಿಸಲು ಅಥವಾ ಅವರು ಒಪ್ಪದಿದ್ದರೆ ಬೇರೊಬ್ಬರನ್ನು ಅವರ ಸ್ಥಾನಕ್ಕೆ ತರುವ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್‌, ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕನ ಆಯ್ಕೆ ಬಗ್ಗೆ ಇನ್ನೂ ತಲೆಕೆಡಿಸಿಕೊಂಡಂತಿಲ್ಲ.

ಕಳೆದ ಲೋಕಸಭೆಯಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಕಾಂಗ್ರೆಸ್‌ ನಾಯಕರಾಗಿದ್ದರು. ಈ ಬಾರಿ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಸ್ಥಾನಕ್ಕೆ ಶಶಿ ತರೂರ್‌ ಅಥವಾ ಮನೀಶ್‌ ತಿವಾರಿ ನೇಮಕವಾಗಬಹುದು ಎನ್ನಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಸೋಮವಾರ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಂಸದ ಅಧೀರ್‌ ರಂಜನ್‌ ಚೌಧರಿ ಹಾಗೂ ಕೇರಳ ಕಾರ್ಯಾಧ್ಯಕ್ಷ ಕೆ. ಸುರೇಶ್‌ ಭಾಗಿಯಾಗಿದ್ದಾರೆ. ಹೀಗಾಗಿ ಅವರಿಬ್ಬರಲ್ಲಿ ಯಾರಾದರೂ ಒಬ್ಬರು ಆಯ್ಕೆಯಾಗುತ್ತಾರಾ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.